
ದೇಹದ ಮೇಲೆ ಹೊರಗಿನಿಂದ ದಾಳಿ ಮಾಡುವಂತಹ ಸೋಂಕು, ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳನ್ನು ತಡೆಯಲು ನಮ್ಮ ಪ್ರತಿರೋಧಕ ವ್ಯವಸ್ಥೆ (Immune System) ಬಲವಾಗಿರುವುದು ಅತೀ ಅಗತ್ಯ. ಕೊರೋನಾ ಮಹಾಮಾರಿಯ ನಂತರ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಮತ್ತು ರೋಗ ನಿರೋಧಕ ವ್ಯವಸ್ಥೆಯ ಬಗ್ಗೆ ಜಾಗ್ರತೆ ವಹಿಸಲು ಆರಂಭಿಸಿದ್ದಾರೆ. ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯಿದ್ದರೆ ಪ್ರತಿರೋಧಕ ವ್ಯವಸ್ಥೆ ಬಲವಾಗಿರುತ್ತದೆ. ಆದರೆ ಒತ್ತಡ, ಆತಂಕ, ಮತ್ತು ಅತಿಯಾದ ಆಲ್ಕೋಹಾಲ್ ಸೇವನೆಯು ಇದರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ದುರ್ಬಲ ಪ್ರತಿರೋಧಕ ವ್ಯವಸ್ಥೆ ಹೊಂದಿರುವವರು ಸೋಂಕಿಗೆ ಬೇಗನೆ ತುತ್ತಾಗುತ್ತಾರೆ ಎಂದು ಅಧ್ಯಯನಗಳು ಹೇಳಿವೆ. ನಿಮ್ಮ ಪ್ರತಿರೋಧಕ ಶಕ್ತಿ ದುರ್ಬಲವಾಗಿದೆ ಎಂಬುದನ್ನು ಸೂಚಿಸುವ ಕೆಲವು ಪ್ರಮುಖ ಲಕ್ಷಣಗಳು ಇಲ್ಲಿವೆ:
ದುರ್ಬಲ ಪ್ರತಿರೋಧಕ ವ್ಯವಸ್ಥೆಯ ಪ್ರಮುಖ ಲಕ್ಷಣಗಳು
- ಪದೇ ಪದೇ ಅನಾರೋಗ್ಯ ಮತ್ತು ದೀರ್ಘ ಚೇತರಿಕೆ: ಯಾರಾದರೂ ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಲಿದ್ದರೆ, ಅವರ ಪ್ರತಿರೋಧಕ ಶಕ್ತಿಯು ದುರ್ಬಲವಾಗಿದೆ ಎಂದು ಹೇಳಬಹುದು. ದೇಹವು ದುರ್ಬಲ ವ್ಯವಸ್ಥೆಯಿಂದಾಗಿ ಹಾನಿಕಾರಕ ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ವೈರಸ್‌ಗಳನ್ನು ಹೊರಗೆ ಹಾಕಲು ವಿಫಲವಾಗುತ್ತದೆ.
- ವರ್ಷದಲ್ಲಿ ಮೂರು ಸಲಕ್ಕಿಂತಲೂ ಹೆಚ್ಚು ಶೀತಕ್ಕೆ ಒಳಗಾಗುವುದು.
- ಸಾಮಾನ್ಯ ಬ್ಯಾಕ್ಟೀರಿಯಾ ಸೋಂಕಿಗೆ ವರ್ಷದಲ್ಲಿ ಎರಡು ಸಲಕ್ಕಿಂತಲೂ ಹೆಚ್ಚು ಆ್ಯಂಟಿಬಯೋಟಿಕ್ (ರೋಗ ನಿರೋಧಕ ಔಷಧಿ) ತೆಗೆದುಕೊಳ್ಳುವುದು.
- ಗಾಯ ಅಥವಾ ಹುಣ್ಣು ಒಣಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು ಸಹ ದುರ್ಬಲ ಪ್ರತಿರೋಧಕ ವ್ಯವಸ್ಥೆಯನ್ನು ಸೂಚಿಸುತ್ತದೆ.
- ನಿಶ್ಯಕ್ತಿ ಕಾಡುವುದು: ಹೆಚ್ಚು ನಿದ್ರೆ ಮಾಡಿದರೂ ಆಲಸ್ಯವು ದೇಹದಲ್ಲಿ ಇದ್ದರೆ, ಅದು ದುರ್ಬಲ ಪ್ರತಿರೋಧಕ ವ್ಯವಸ್ಥೆಯ ಲಕ್ಷಣವಾಗಿರಬಹುದು. ದುರ್ಬಲ ಪ್ರತಿರೋಧಕ ವ್ಯವಸ್ಥೆಯು ಸೋಂಕಿನ ವಿರುದ್ಧ ಹೋರಾಡಲು ನಿಮ್ಮ ಶಕ್ತಿಯನ್ನು ಅತಿಯಾಗಿ ವ್ಯಯಿಸುವುದರಿಂದ ನಿಶ್ಯಕ್ತಿ ಕಾಡುತ್ತದೆ.
- ಹೊಟ್ಟೆಯ ಸಮಸ್ಯೆಗಳು: ಜಾನ್ ಹಾಪ್ಕಿನ್ಸ್ ಯೂನಿವರ್ಸಿಟಿಯ ಅಧ್ಯಯನದ ಪ್ರಕಾರ, ಪ್ರತಿರೋಧಕ ವ್ಯವಸ್ಥೆಯು ನಮ್ಮ ಹೊಟ್ಟೆಯ ಆರೋಗ್ಯದ ಮೇಲೆ ಅಲವಂಬಿತವಾಗಿದೆ. ಜಠರಕರುಳಿನ ವ್ಯವಸ್ಥೆಯಲ್ಲಿನ ಒಳ್ಳೆಯ ಬ್ಯಾಕ್ಟೀರಿಯಾದಲ್ಲಿ ಅಸಮತೋಲನ ಉಂಟಾದರೆ, ಪದೇ ಪದೇ ಸೋಂಕಿಗೆ ಒಳಗಾಗಬೇಕಾಗುತ್ತದೆ. ಪದೇ ಪದೇ ಅತಿಸಾರ ಮತ್ತು ಮಲಬದ್ಧತೆಗೆ ಗುರಿಯಾಗುತ್ತಿದ್ದರೆ, ಅದು ದುರ್ಬಲ ಪ್ರತಿರೋಧಕ ವ್ಯವಸ್ಥೆಯ ಸಂಕೇತವಾಗಿರಬಹುದು.
- ಬಾಯಿಯ ಹುಣ್ಣು: ತುಟಿ ಅಥವಾ ನಾಲಗೆ ಕಚ್ಚಿದಾಗ ಬಾಯಿಯಲ್ಲಿ ಹುಣ್ಣು ಉಂಟಾಗುವುದು ಸಹಜ. ಆದರೆ, ಪದೇ ಪದೇ ಇಂತಹ ಹುಣ್ಣುಗಳು ಕಾಣಿಸಿಕೊಂಡರೆ, ನಿಮ್ಮ ದೇಹದ ಪ್ರತಿರೋಧಕ ವ್ಯವಸ್ಥೆಯು ದುರ್ಬಲವಾಗಿದೆ ಎನ್ನಬಹುದು. ಒತ್ತಡದಿಂದಲೂ ಬಾಯಿಯಲ್ಲಿ ಹುಣ್ಣು ಮೂಡಬಹುದು.




































