
ಕಾರ್ಕಳ : ಯುನಿಯನ್ ಬ್ಯಾಂಕ್ ಹೆಸರಿನಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬನು ಕೆವೈಸಿ ಅಪ್‌ಡೇಟ್ ಮಾಡುವ ನೆಪದಲ್ಲಿ ನಿವೃತ್ತ ನರ್ಸ್‌ರೊಬ್ಬರ ಖಾತೆಯಿಂದ ₹5.19 ಲಕ್ಷ ಎಗರಿಸಿರುವ ಪ್ರಕರಣ ಕಾರ್ಕಳ ತಾಲೂಕಿನ ಸಾಣೂರಿನಲ್ಲಿ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಸಾಣೂರಿನ ಪ್ರೇಮಲತಾ (ವಯಸ್ಸು 58) ಎಂಬವರು ಯುನಿಯನ್ ಬ್ಯಾಂಕ್‌ನ ಗ್ರಾಹಕರಾಗಿದ್ದು, ನಿವೃತ್ತ ನರ್ಸ್ ಆಗಿದ್ದಾರೆ. ಜೂನ್ 26ರಂದು ಅವರು ರೈಲಿನಲ್ಲಿ ಮುಂಬೈಗೆ ಪ್ರಯಾಣಿಸುತ್ತಿದ್ದಾಗ, 7076260938 ಎಂಬ ನಂಬರಿನಿಂದ ಕರೆ ಬಂದಿದೆ . ಕರೆ ಮಾಡಿದ ವ್ಯಕ್ತಿ ತನ್ನನ್ನು ಕಾರ್ಕಳ ಸಾಣೂರು ಶಾಖೆಯ ಯುನಿಯನ್ ಬ್ಯಾಂಕ್ ಉದ್ಯೋಗಿಯೆಂದು ಪರಿಚಯಿಸಿಕೊಂಡು, “ನಿಮ್ಮ ಖಾತೆ ಕೆವೈಸಿ ಅಪ್‌ಡೇಟ್ ಆಗಿಲ್ಲ. ಡೆಬಿಟ್ ಕಾರ್ಡ್ ನಂಬರ್ ನೀಡಿ,” ಎಂದು ಕೇಳಿದ್ದ. ಅಧಿಕೃತ ಬ್ಯಾಂಕ್ ಕರೆ ಎಂದು ನಂಬಿದ ಪ್ರೇಮಲತಾ ತಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ನೀಡಿದ್ದರು. ಬಳಿಕ, ಅದೇ ವ್ಯಕ್ತಿ ಮತ್ತೆ ಕರೆ ಮಾಡಿ “ಅಪ್‌ಡೇಟ್ ಆಗಿದೆ” ಎಂದು ಭರವಸೆ ನೀಡಿದ್ದ. ಆದರೆ, ಅದೇ ದಿನ ರಾತ್ರಿ 8:18 ಕ್ಕೆ ಪ್ರೇಮಲತಾ ಅವರ ಖಾತೆಯಿಂದ ₹2,50,000 ಕಡಿತವಾಯಿತು. ಕೆಲ ನಿಮಿಷಗಳಲ್ಲಿ ಮತ್ತೊಂದು ₹2,50,000 ಮತ್ತು ನಂತರ ₹19,000 ಹಣವೂ ಕಡಿತವಾಗಿದೆ. ಒಟ್ಟು ₹5,19,000 ನಗದು ಅವರ ಖಾತೆಯಿಂದ ಪೋಲಾಗಿರುವುದು ಪತ್ತೆಯಾಗಿದೆ.
ಕಾನೂನು ಕ್ರಮ:
ಈ ಸಂಬಂಧ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೈಬರ್ ಕ್ರೈಂ ವಿಭಾಗ ತನಿಖೆ ಆರಂಭಿಸಿದೆ. ಶೀಘ್ರದಲ್ಲಿ ಕರೆ ಮಾಡಿದ ವ್ಯಕ್ತಿಯ ಟ್ರಾನ್ಸಾಕ್ಷನ್ ಹಾದಿ ಹಾಗೂ ಬ್ಯಾಂಕ್ ದಾಖಲೆಗಳನ್ನು ಶೋಧಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.
ಪೊಲೀಸರ ಎಚ್ಚರಿಕೆ:
ಸಾರ್ವಜನಿಕರು ಈ ರೀತಿಯ ಕರೆಗಳಿಗೆ ಸ್ಪಂದಿಸದೇ, ಯಾವುದೇ ಖಾತೆ ವಿವರಗಳನ್ನು ನೀಡಬಾರದು. ಯಾವುದೇ ಬ್ಯಾಂಕ್ ಉದ್ಯೋಗಿ ದೂರವಾಣಿ ಮೂಲಕ ಖಾತೆ ಸಂಖ್ಯೆ ಅಥವಾ ಕಾರ್ಡ್ ವಿವರ ಕೇಳುವುದಿಲ್ಲ ಎಂಬುದನ್ನು ಪೊಲೀಸ್ ಇಲಾಖೆ ಎಚ್ಚರಿಕೆಯ ರೂಪದಲ್ಲಿ ತಿಳಿಸಿದ್ದಾರೆ.