
ಉಡುಪಿ : ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿತರಣೆ ಜಾಲವೊಂದನ್ನು ಭೇದಿಸುವಲ್ಲಿ ಭಾರತ ಮುನ್ನಡೆ ಸಾಧಿಸಿದ್ದು, Narcotics Control Bureau (NCB) ನಡೆಸಿದ ‘ಆಪರೇಷನ್ ಮೆಡ್ ಮ್ಯಾಕ್ಸ್’ನಲ್ಲಿ ಉಡುಪಿಯೂ ಪ್ರಮುಖ ನಕ್ಷೆಯಲ್ಲಿ ಕಾಣಿಸಿಕೊಂಡಿದೆ.
ಈ ಕಾರ್ಯಾಚರಣೆಯಲ್ಲಿ ಅಮೆರಿಕ, ಆಸ್ಟ್ರೇಲಿಯಾ ಸೇರಿದಂತೆ 10ಕ್ಕೂ ಹೆಚ್ಚು ದೇಶಗಳಲ್ಲಿ ಸಕ್ರಿಯವಾಗಿದ್ದ ದೊಡ್ಡ ಮಟ್ಟದ ಡ್ರಗ್ ಸಿಂಡಿಕೇಟ್ ಪತ್ತೆಯಾಗಿದೆ. ಎನ್‌ಸಿಬಿ ನಡೆಸಿದ ಚುರುಕಾದ ಕಾರ್ಯಾಚರಣೆಯಲ್ಲಿ ಈಗಾಗಲೇ 8 ಮಂದಿ ಆರೋಪಿಗಳನ್ನು ಬಂಧಿಸಿ, 5 ಡ್ರಗ್ಸ್ ಸರಕನ್ನು ವಶಕ್ಕೆ ಪಡೆಯಲಾಗಿದೆ. ತಮಿಳುನಾಡು ಮೂಲದ ಜಾಯಲ್ ಅಲ್ಫಾ ಎಂಬಾತನು ಉಡುಪಿಯಲ್ಲಿ ಬಂಧಿತನಾಗಿದ್ದು, ಈತನಿಂದಲೇ ಉಡುಪಿಯಲ್ಲಿ ಡ್ರಗ್ಸ್ ಕಾಲ್ ಸೆಂಟರ್ ಇರುವ ಶಂಕೆ ಬಲಗೊಂಡಿದೆ.
ಆನ್‌ಲೈನ್ ಜಾಹೀರಾತು ಹಾಗೂ ಕರೆಗಳ ಮೂಲಕ ವಿದೇಶಗಳಲ್ಲಿ ನಿಷೇಧಿತ ಔಷಧಿಗಳನ್ನು ಪೂರೈಸುತ್ತಿದ್ದ ಈ ಜಾಲ, ಭಾರತೀಯ ಎನ್‌ಸಿಬಿ ಮತ್ತು ಕೇಂದ್ರ ಗೃಹ ಇಲಾಖೆಯ ನಿಯಂತ್ರಣ ಕಾರ್ಯಾಚರಣೆಯ ಬಲೆಗೆ ಬಿದ್ದಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ – “ಪ್ರತೀ ಮಾದಕ ದ್ರವ್ಯ ಕಳ್ಳಸಾಗಣೆ ಜಾಲವನ್ನು ನಿರ್ಮೂಲನೆ ಮಾಡುವ ದಿಟ್ಟ ಬದ್ಧತೆಯೊಂದಿಗೆ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕಾರ್ಯನಿರ್ವಹಿಸುತ್ತಿದೆ” ಎಂದು ಹೇಳಿದ್ದಾರೆ.