
ವಾಷಿಂಗ್ಟನ್ : ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕದ ಆರ್ಥಿಕ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹತ್ವದ ಹೆಜ್ಜೆಯನ್ನಿಟ್ಟಿದ್ದಾರೆ. ಚೀನಾವನ್ನು ಹೊರತುಪಡಿಸಿ ವಿಶ್ವದ ಇತರೆಲ್ಲಾ ರಾಷ್ಟ್ರಗಳ ಮೇಲೆ ವಿಧಿಸಲಾಗುತ್ತಿರುವ ಆಮದು ಸುಂಕವನ್ನು ಶೇ.10ರಿಂದ ಶೇ.15ಕ್ಕೆ ಏರಿಕೆ ಮಾಡಲು ಟ್ರಂಪ್ ಗಂಭೀರ ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮೀಸನ್ ಗ್ರೀರ್ ಅವರು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಟ್ರಂಪ್ ಅವರ ನಿರ್ದೇಶನದಂತೆ ಅಮೆರಿಕದ ಆಡಳಿತವು ಸುಂಕ ಏರಿಕೆಯ ಪ್ರಕ್ರಿಯೆಯಲ್ಲಿ ತೊಡಗಿದ್ದು, ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ. ವಿಶೇಷವೆಂದರೆ, ಚೀನಾ ಮೇಲೆ ಸದ್ಯಕ್ಕೆ ಯಾವುದೇ ಹೊಸ ಹೆಚ್ಚುವರಿ ಸುಂಕ ವಿಧಿಸುವ ಬಗ್ಗೆ ಟ್ರಂಪ್ ಸೂಚನೆ ನೀಡಿಲ್ಲವಾದರೂ, ಉಳಿದ ರಾಷ್ಟ್ರಗಳ ಉತ್ಪನ್ನಗಳ ಮೇಲೆ ಶೇ.5ರಷ್ಟು ಅಧಿಕ ಹೊರೆ ಬೀಳಲಿದೆ. ಇದು ಅಂತರರಾಷ್ಟ್ರೀಯ ವ್ಯಾಪಾರ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಭಾರತ ಸೇರಿದಂತೆ ಹಲವು ದೇಶಗಳ ರಫ್ತು ಉದ್ಯಮದ ಮೇಲೆ ಇದು ನೇರ ಪರಿಣಾಮ ಬೀರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.




































