
ನವದೆಹಲಿ : ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭೀಕರ ಉಗ್ರ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಬಲಿಯಾಗಿದ್ದು, ಈ ಅಮಾನವೀಯ ಕೃತ್ಯದ ಬೆನ್ನಲ್ಲೇ ಕೇಂದ್ರ ಸರ್ಕಾರ ತೀವ್ರ ನಿರ್ಧಾರಗಳನ್ನು ಕೈಗೊಂಡಿದೆ. ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ನಡೆದ ಉನ್ನತ ಮಟ್ಟದ ಸಂಪುಟ ಸಮಿತಿ ಸಭೆಯಲ್ಲಿ ಪಾಕಿಸ್ತಾನದ ವಿರುದ್ಧ ಗಂಭೀರ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.
ದಾಳಿಗೆ ಹೊಣೆ ಹೊತ್ತಿರುವ ‘ಕಾಶ್ಮೀರ್ ರೆಸಿಸ್ಟೆನ್ಸ್’ ಸಂಘಟನೆಯು ಪಾಕಿಸ್ತಾನದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಅಂಗಸಂಸ್ಥೆಯಾಗಿದೆ ಎಂಬುದು ಭದ್ರತಾ ಸಂಸ್ಥೆಗಳ ತನಿಖೆಯಿಂದ ಹೊರಬಿದ್ದಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಭಾರತವು ಪಾಕಿಸ್ತಾನದ ವಿರುದ್ಧ ನಿರ್ಣಾಯಕ ಕ್ರಮಗಳನ್ನು ಘೋಷಿಸಿದೆ.
ಭಾರತ ಸರ್ಕಾರ ಪ್ರಕಟಿಸಿದ ಪ್ರಮುಖ ಕ್ರಮಗಳು ಇಂತಿವೆ:
- ಅಟ್ಟಾರಿ – ವಾಘಾ ಗಡಿಯನ್ನು ಶಾಶ್ವತವಾಗಿ ಮುಚ್ಚಲು ನಿರ್ಧಾರ
- ಸಿಂಧೂ ಜಲ ಒಪ್ಪಂದವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸುವುದು
- ಇನ್ನು ಮುಂದೆ ಪಾಕಿಸ್ತಾನಿ ಪ್ರಜೆಗಳಿಗೆ ಭಾರತ ಪ್ರವೇಶಕ್ಕೆ ನಿಷೇಧ
- ಈಗಾಗಲೇ ಭಾರತದಲ್ಲಿ ಇರುವ ಪಾಕ್ ಪ್ರಜೆಗಳು 48 ಗಂಟೆಗಳ ಒಳಗೆ ದೇಶ ತೊರೆಯಬೇಕು
- ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನ ರಕ್ಷಣಾ, ನೌಕಾ ಹಾಗೂ ವಾಯು ಸಲಹೆಗಾರರಿಗೆ ದೇಶ ತೊರೆಯಲು 7 ದಿನಗಳ ಗಡುವು
- ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ರಕ್ಷಣಾ, ನೌಕಾ ಹಾಗೂ ವಾಯು ಸಲಹೆಗಾರರನ್ನು ಭಾರತಕ್ಕೆ ವಾಪಸ್ ಕರೆಸಿಕೊಳ್ಳಲು ತೀರ್ಮಾನ
- ಪಾಕಿಸ್ತಾನಿ ಹೈಕಮಿಷನ್‌ನ ಸಿಬ್ಬಂದಿ ಸಂಖ್ಯೆ 55 ರಿಂದ 30 ಕ್ಕೆ ಇಳಿಸುವ ತೀರ್ಮಾನ; ಈ ಕ್ರಮ ಮೇ 1ರಿಂದ ಜಾರಿಗೆ ಬರಲಿದೆ
ಈ ಮಹತ್ವದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ದೇಶದ ಉನ್ನತ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.
ಭಾರತದ ಈ ತೀವ್ರ ತೀರ್ಮಾನಗಳು ಉಗ್ರರ ವಿರುದ್ಧದ ಕಠಿಣ ನಿಲುವಿನ ಸಂಕೇತವಾಗಿದ್ದು, ಪಾಕಿಸ್ತಾನದ ಮೇಲೆ ರಾಜತಂತ್ರ ಮತ್ತು ಭದ್ರತಾ ಮಾದರಿಯಲ್ಲಿ ಬಲಿಷ್ಠ ಒತ್ತಡ ತರಲಿದೆ ಎಂಬ ನಿರೀಕ್ಷೆಯಿದೆ.