
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 12 (BBK12) ಕಾರ್ಯಕ್ರಮವು ಪ್ರಸ್ತುತ ರೋಚಕ ಹಂತವನ್ನು ತಲುಪಿದೆ. ಇತ್ತೀಚೆಗೆ ಡಾಗ್ ಸತೀಶ್ ಅವರ ಎಲಿಮಿನೇಷನ್ ನಂತರ ಮನೆಯ ವಾತಾವರಣ ಇನ್ನಷ್ಟು ಬಿಸಿಯಾಗಿದೆ. ಇದೀಗ ನಾಮಿನೇಷನ್ ಪ್ರಕ್ರಿಯೆ ಮತ್ತಷ್ಟು ಸ್ಪರ್ಧಿಗಳನ್ನು ಅಪಾಯಕ್ಕೆ ಸಿಲುಕಿಸಿದೆ, ಒಟ್ಟು 12 ಮಂದಿ ಸ್ಪರ್ಧಿಗಳು ಹೊರಹೋಗುವ ಭೀತಿಯಲ್ಲಿದ್ದಾರೆ. ವಾರದ ಕೊನೆಯಲ್ಲಿ ಮಿನಿ ಫಿನಾಲೆ ನಡೆಯುವ ಸಾಧ್ಯತೆ ಇದ್ದು, ಅದಕ್ಕೂ ಮುನ್ನ ಕೆಲ ಸ್ಪರ್ಧಿಗಳು ದೊಡ್ಮನೆಯಿಂದ ಹೊರಬೀಳುವ ನಿರೀಕ್ಷೆಯಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ, ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಪ್ರಮುಖವಾಗಿ ಅಶ್ವಿನಿ, ಜಾನ್ವಿ ಮತ್ತು ರಕ್ಷಿತಾ ಶೆಟ್ಟಿ ನಡುವಿನ ವಾಗ್ವಾದವು ದೊಡ್ಮನೆಯಲ್ಲಿ ದೊಡ್ಡ ಹೈಡ್ರಾಮವನ್ನೇ ಸೃಷ್ಟಿಸಿದೆ.
ವಿವಾದದ ಆರಂಭದಲ್ಲಿ, ಜಾನ್ವಿ ಅವರು “ನನ್ನನ್ನು ಒಂದು ಮಗು ಎಂದು ಭಾವಿಸಿದ್ದೀರಾ? ನನಗೆ ಪ್ರಬುದ್ಧತೆ (ಮೆಚ್ಯೂರಿಟಿ) ಇಲ್ಲವೇ?” ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಕ್ಷಿತಾ ಶೆಟ್ಟಿ, “ಹೌದು, ನೀವು ಮಗುವೇ. ನೀವು ದೊಡ್ಡ ‘ನಾಗವಲ್ಲಿ’. ನೀವು ಏನು ಮಾಡಿದರೋ, ಅದಕ್ಕೆ ನಾನು ಪ್ರತಿ ಉತ್ತರ ಕೊಟ್ಟಿದ್ದೇನೆ” ಎಂದು ನೇರವಾಗಿ ತಿರುಗೇಟು ನೀಡಿದರು. ರಕ್ಷಿತಾ ಅವರ ಈ ಹೇಳಿಕೆ ದೊಡ್ಮನೆಯ ವಾತಾವರಣವನ್ನು ಕ್ಷಣಾರ್ಧದಲ್ಲಿ ಉದ್ವಿಗ್ನಗೊಳಿಸಿತು.
ಈ ಮಾತನ್ನು ಕೇಳಿದ ತಕ್ಷಣ ಅಶ್ವಿನಿ ಅವರು ರೊಚ್ಚಿಗೆದ್ದರು. “ಯಾರಿಗೆ ಈ ಮಾತುಗಳನ್ನು ಹೇಳುತ್ತಿದ್ದೀಯಾ? ಹೆಚ್ಚು ಮಾತನಾಡಬೇಡ, ಸುಮ್ಮನೆ ಹೋಗಿ ಮಲಗು. ನೀನು ಎಲ್ಲಿಂದ ಬಂದಿದ್ದೀಯಾ ಎಂಬುದು ನನಗೆ ತಿಳಿದಿದೆ. ನಿನ್ನ ಎಲ್ಲ ನಾಟಕಗಳನ್ನು ಬಾತ್‌ರೂಮಿನಲ್ಲಿ ಮಾಡು. ನೋಡಿದರೆ ಎಲ್ಲವೂ ಗೊತ್ತಾಗುತ್ತದೆ” ಎಂದು ತೀವ್ರ ಸ್ವರದಲ್ಲಿ ಅಶ್ವಿನಿ ಕಿಡಿಕಾರಿದರು.
ಅಶ್ವಿನಿ ಅವರ ಆಕ್ರೋಶಕ್ಕೆ ಜಗ್ಗದ ರಕ್ಷಿತಾ, “ನಾನು ನೂರು ಬಾರಿ ಬೇಕಾದರೂ ಬಾತ್‌ರೂಮಿಗೆ ಹೋಗುತ್ತೇನೆ, ಅದರಿಂದ ನಿಮಗೆ ಏನಾಗುತ್ತದೆ?” ಎಂದು ಪ್ರಶ್ನಿಸುವ ಮೂಲಕ ವಾಗ್ವಾದವನ್ನು ಮುಂದುವರೆಸಿದರು. ಸ್ಪರ್ಧಿಗಳ ನಡುವಿನ ಈ ತೀವ್ರ ಮಾತಿನ ಚಕಮಕಿ ಮತ್ತು ವೈಯಕ್ತಿಕ ಟೀಕೆಗಳನ್ನೊಳಗೊಂಡ ಪ್ರೋಮೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಇಂದು ರಾತ್ರಿ (ಅಕ್ಟೋಬರ್ 17) ಪ್ರಸಾರವಾಗಲಿರುವ ಸಂಚಿಕೆಯಲ್ಲಿ ಈ ಹೈಡ್ರಾಮಾವನ್ನು ವೀಕ್ಷಿಸಬಹುದು.




































