
ಅರಿವಳಿಕೆ ಮದ್ದು ಬಳಸಿ ತನ್ನ ವೈದ್ಯೆ ಪತ್ನಿಯನ್ನು ಕೊಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಡಾ. ಮಹೇಂದ್ರ ರೆಡ್ಡಿ ಅವರನ್ನು ಮಾರತ್ತಹಳ್ಳಿ ಠಾಣೆ ಪೊಲೀಸರು 8 ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದು, ಗುರುವಾರ ಹತ್ಯೆ ನಡೆದ ಸ್ಥಳ ಸೇರಿದಂತೆ ಎರಡು ಪ್ರಮುಖ ಕಡೆಗಳಲ್ಲಿ ಮಹಜರು ನಡೆಸಿದ್ದಾರೆ.
ಹತ್ಯೆಗೀಡಾದ ವೈದ್ಯೆ ಡಾ. ಕೃತಿಕಾ ರೆಡ್ಡಿ ಅವರ ಮುನೇಕೊಳಲು, ಅಯ್ಯಪ್ಪಸ್ವಾಮಿ ಲೇಔಟ್‌ನ ನಿವಾಸ ಮತ್ತು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಪೊಲೀಸರು ಮಹಜರು ಪ್ರಕ್ರಿಯೆ ಕೈಗೊಂಡರು. ವಿಧಿವಿಜ್ಞಾನ ತಜ್ಞರು (FSL), ಬೆರಳಚ್ಚು ಪರಿಣತರು ಮತ್ತು ಶ್ವಾನದಳದ ತಂಡದೊಂದಿಗೆ ಆರೋಪಿ ಡಾ. ಮಹೇಂದ್ರ ರೆಡ್ಡಿಯನ್ನು ಕರೆದೊಯ್ದು ತನಿಖೆ ನಡೆಸಲಾಯಿತು. ಸುಮಾರು 6 ತಿಂಗಳ ಹಿಂದೆ ಕೃತಿಕಾ ರೆಡ್ಡಿ ಮೃತಪಟ್ಟ ಸ್ಥಳದಲ್ಲಿ ತನಿಖಾಧಿಕಾರಿಗಳು ಸೂಕ್ಷ್ಮ ಶೋಧ ಕಾರ್ಯ ನಡೆಸಿದರು. ಈ ವೇಳೆ, ಕೊಲೆಗೆ ಬಳಸಲಾದ ಕ್ಯಾನುಲಾ ಸೆಟ್ ಮತ್ತು ಇಂಜೆಕ್ಷನ್ ಟ್ಯೂಬ್‌ಗಳಂತಹ ಪ್ರಮುಖ ಸಾಕ್ಷ್ಯಾಧಾರಗಳ ಸ್ಥಳಗಳನ್ನು ಪರಿಶೀಲಿಸಲಾಯಿತು.
ಆರೋಪಿ ಮಹೇಂದ್ರ ರೆಡ್ಡಿ ಎಷ್ಟು ಬಾರಿ ಪತ್ನಿಯ ಮನೆಗೆ ಭೇಟಿ ನೀಡಿದ್ದ, ಯಾವ ಸಮಯದಲ್ಲಿ ಬರುತ್ತಿದ್ದ ಮತ್ತು ಯಾವೆಲ್ಲ ಚುಚ್ಚುಮದ್ದುಗಳನ್ನು ನೀಡಿದ್ದ ಎಂಬ ಬಗ್ಗೆ ಪೊಲೀಸರು ಕೂಲಂಕಷ ಮಾಹಿತಿ ಸಂಗ್ರಹಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಿಂದ ಕ್ಯಾನುಲಾ ಸೆಟ್ ಅನ್ನು ಯಾರದರ ಮೂಲಕ ತರಿಸಿಕೊಂಡಿದ್ದ ಎಂಬ ಸುಳಿವುಗಳು ತನಿಖಾಧಿಕಾರಿಗಳಿಗೆ ಲಭ್ಯವಾಗಿವೆ ಎಂದು ತಿಳಿದುಬಂದಿದೆ. ಇದರ ಮುಂದುವರಿದ ಭಾಗವಾಗಿ, ಪೊಲೀಸರು ಶುಕ್ರವಾರ ವರ್ತೂರಿನ ಗುಂಜೂರಿನಲ್ಲಿರುವ ಡಾ. ಮಹೇಂದ್ರ ರೆಡ್ಡಿ ಅವರ ನಿವಾಸದಲ್ಲಿ ಮಹಜರು ನಡೆಸಿ, ಕುಟುಂಬ ಸದಸ್ಯರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಸಾಧ್ಯತೆಯಿದೆ.
ವಿಕ್ಟೋರಿಯಾ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟ್ರಾಲಜಿ ವಿಭಾಗದ ಮೂಲಗಳ ಪ್ರಕಾರ, ಆರೋಪಿ ಡಾ. ಮಹೇಂದ್ರ ರೆಡ್ಡಿ ಅವರು 2025ರ ಮಾರ್ಚ್ ತಿಂಗಳಲ್ಲಿ ತಮ್ಮ ಫೆಲೋಷಿಪ್ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದರು. ನಂತರ ಗುತ್ತಿಗೆ ಆಧಾರದ ಮೇಲೆ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು, ಜುಲೈ 2 ರಂದು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದರು.
ಬೇರೊಬ್ಬ ವೈದ್ಯೆಯೊಂದಿಗೆ ಅಕ್ರಮ ಸಂಬಂಧ: ಆರೋಪಿ ತಪ್ಪೊಪ್ಪಿಗೆ
ಪತ್ನಿಯ ಹತ್ಯೆಗೈದ ಬಗ್ಗೆ ಪೊಲೀಸರ ಮುಂದೆ ಆರೋಪಿ ಡಾ. ಮಹೇಂದ್ರ ರೆಡ್ಡಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೃತಿಕಾ ರೆಡ್ಡಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು, ಇದರಿಂದ ಬೇಸರಗೊಂಡಿದ್ದೆ ಮತ್ತು ಅವರೊಂದಿಗೆ ಆತ್ಮೀಯವಾಗಿ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದು ಮಹೇಂದ್ರ ಹೇಳಿದ್ದಾರೆ. ಇದರ ಜೊತೆಗೆ, ತನಗೆ ಬೇರೊಬ್ಬ ವೈದ್ಯೆಯೊಂದಿಗೆ ಅನೈತಿಕ ಸಂಬಂಧವಿತ್ತು ಎಂಬುದನ್ನು ಕೂಡ ಆರೋಪಿ ಒಪ್ಪಿಕೊಂಡಿದ್ದಾನೆ. ಈ ಕಾರಣಗಳೇ ಕೊಲೆ ಕೃತ್ಯ ಎಸಗಲು ಪ್ರೇರೇಪಿಸಿದವು ಎಂದು ಆತ ಹೇಳಿಕೆ ನೀಡಿದ್ದಾನೆ. ಈ ಹೇಳಿಕೆಗಳ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.




































