
ನವದೆಹಲಿ: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ವಿಚಾರದಲ್ಲಿ ಕೇಂದ್ರ ಸರ್ಕಾರದ ನಿಲುವನ್ನು ಕಾಂಗ್ರೆಸ್ ಸಂಸದೀಯ ಮಂಡಳಿಯ ಅಧ್ಯಕ್ಷೆ ಸೋನಿಯಾ ಗಾಂಧಿ ತೀವ್ರವಾಗಿ ಪ್ರಶ್ನಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಇಂತಹ ಗಂಭೀರ ಬೆಳವಣಿಗೆಯ ಬಗ್ಗೆ ಭಾರತ ಸರ್ಕಾರ ಮೌನಕ್ಕೆ ಶರಣಾಗಿರುವುದು ರಾಜತಾಂತ್ರಿಕ ವಿಫಲತೆ ಎಂದು ಅವರು ಬಣ್ಣಿಸಿದ್ದಾರೆ.
‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ ಲೇಖನದ ಮೂಲಕ ವಿದೇಶಾಂಗ ನೀತಿಯಲ್ಲಿನ ಬದಲಾವಣೆಗಳ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಮಾರ್ಚ್ 1 ರಂದು ನಡೆದ ದಾಳಿಯಲ್ಲಿ ಖಮೇನಿ ಅವರ ಹತ್ಯೆಯಾಗಿರುವುದನ್ನು ಇರಾನ್ ಅಧಿಕೃತವಾಗಿ ಘೋಷಿಸಿದ ಬೆನ್ನಲ್ಲೇ, ಸೋನಿಯಾ ಗಾಂಧಿ ಅವರು ಈ ವಿಚಾರದಲ್ಲಿ ಭಾರತದ “ತಟಸ್ಥ” ಎನ್ನಲಾಗುವ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ.
ಐತಿಹಾಸಿಕ ಸಂಬಂಧದ ನೆನಪು: ಭಾರತ ಮತ್ತು ಇರಾನ್ ನಡುವಿನ ಸಂಬಂಧವು ಕೇವಲ ರಾಜತಾಂತ್ರಿಕವಲ್ಲ, ಅದು ಸಾಂಸ್ಕೃತಿಕ ಮತ್ತು ಕಾರ್ಯತಂತ್ರದ ಮೌಲ್ಯಗಳನ್ನು ಹೊಂದಿದೆ ಎಂದು ಸೋನಿಯಾ ಪ್ರತಿಪಾದಿಸಿದ್ದಾರೆ. ಮುಖ್ಯವಾಗಿ 1994 ರಲ್ಲಿ ಕಾಶ್ಮೀರದ ವಿಚಾರವಾಗಿ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನ ಮಂಡಿಸಲು ಹೊರಟಿದ್ದ ನಿರ್ಣಯವನ್ನು ಇರಾನ್ ತಡೆಹಿಡಿದು ಭಾರತಕ್ಕೆ ಬೆಂಬಲ ನೀಡಿದ್ದನ್ನು ಅವರು ಸ್ಮರಿಸಿದ್ದಾರೆ. ಅಂದು ಇರಾನ್ ನೀಡಿದ ಬೆಂಬಲವು ಭಾರತದ ಸಾರ್ವಭೌಮತ್ವದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂಬುದನ್ನು ಅವರು ಎತ್ತಿ ತೋರಿಸಿದ್ದಾರೆ.
ಕಾರ್ಯತಂತ್ರದ ಮಹತ್ವ: ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಜಹೇದಾನ್‌ನಲ್ಲಿ ಭಾರತದ ರಾಜತಾಂತ್ರಿಕ ಉಪಸ್ಥಿತಿಗೆ ಇರಾನ್ ನೀಡಿರುವ ಅವಕಾಶವು, ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಗೆ ಪ್ರತ್ಯುತ್ತರ ನೀಡಲು ಭಾರತಕ್ಕೆ ಶಕ್ತಿ ತುಂಬಿದೆ. ಇಂತಹ ಆಪ್ತ ಮಿತ್ರ ರಾಷ್ಟ್ರದ ನಾಯಕನ ಹತ್ಯೆಯಾದಾಗ ಮೌನ ತಾಳುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಶ್ವಾಸಾರ್ಹತೆಯನ್ನು ಕುಂದಿಸುತ್ತದೆ ಎಂದು ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ.
ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ: ಮಾತುಕತೆಗಳು ಚಾಲ್ತಿಯಲ್ಲಿರುವಾಗಲೇ ಒಂದು ದೇಶದ ಮುಖ್ಯಸ್ಥನನ್ನು ಗುರಿಯಾಗಿಸಿ ಹತ್ಯೆ ಮಾಡುವುದು ಅಂತರರಾಷ್ಟ್ರೀಯ ನಿಯಮಗಳ ಉಲ್ಲಂಘನೆಯಾಗಿದೆ. ಇಂತಹ ಸಂದರ್ಭದಲ್ಲಿ ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ಧ್ವನಿಯನ್ನು ಎತ್ತಬೇಕಿತ್ತು. ಆದರೆ ಮೋದಿ ಸರ್ಕಾರದ ನಿಶ್ಯಬ್ದವು ಜವಾಬ್ದಾರಿಯುತ ನಡೆಯಲ್ಲ ಎಂದು ಅವರು ಟೀಕಿಸಿದ್ದಾರೆ.




































