
ಉಡುಪಿ : ಬ್ರಹ್ಮಾವರ ತಾಲೂಕಿನ ಕುಂಜಾಲು ಗ್ರಾಮದಲ್ಲಿ ಶನಿವಾರ ತಡರಾತ್ರಿ ಪತ್ತೆಯಾದ ಹಸುವಿನ ರುಂಡ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಬಂಧಿತರು:
ಈ ಪ್ರಕರಣದಲ್ಲಿ ಕೇಶವ್ ರಾಮಣ್ಣ, ನವೀನ್, ಪ್ರಸಾದ್, ರಾಜೇಶ್, ಸಂದೇಶ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ರಾಮಣ್ಣಎಂಬುವವನು ಪ್ರಮುಖ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಜೂನ್ 29ರಂದು ರಾತ್ರಿ ಕುಂಜಾಲು ರಾಮ ಮಂದಿರದ ಬಳಿ ಹಸುವಿನ ತಲೆಯ ಭಾಗ (ರುಂಡ) ಪತ್ತೆಯಾದ ನಂತರ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಕ್ಷಣವೇ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ನಾಲ್ಕು ತನಿಖಾ ತಂಡಗಳನ್ನು ರಚಿಸಲಾಯಿತು.
ತೀವ್ರ ತನಿಖೆಯಿಂದ 24 ಗಂಟೆಯೊಳಗೆ ಬಂಧನ:
ಘಟನೆಯ ನಂತರ ಕೇವಲ 24 ಗಂಟೆಯೊಳಗೆ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿ ಸಂಶಯಿತರು ಕ್ಯಾರಿ ಬಳಿಯ ಪ್ರದೇಶದಲ್ಲಿ ಹಸುವನ್ನು ಕಡಿದು, ಅದರ ದೇಹವನ್ನು ಸ್ಕೂಟರ್ ಮತ್ತು ಕಾರುಗಳ ಮೂಲಕ ಸ್ಥಳಾಂತರಿಸುತ್ತಿದ್ದ ಸಂದರ್ಭ ತಲೆಯ ಭಾಗ ರಸ್ತೆಗೆ ಬಿದ್ದಿದೆ ಎಂಬುದು ತಿಳಿದು ಬಂದಿದೆ.
ಸಾಕ್ಷ್ಯ ವಶಕ್ಕೆ:
ಅವರು ಬಳಸಿದ ಸ್ವಿಫ್ಟ್ ಕಾರು ಮತ್ತು ಸ್ಕೂಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಸು ಸಾಗಾಣಿಕೆಗೆ ಬಳಸಿದ ವಾಹನಗಳ ಮೇಲೆ ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ.
ಪೊಲೀಸರ ಎಚ್ಚರಿಕೆ:
ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಕೋಮು ಭಾವನೆ ಉಂಟುಮಾಡುವ ಪೋಸ್ಟ್‌ಗಳನ್ನು ಮಾಡಬಾರದು ಎಂದು ಎಸ್‌ಪಿ ಎಚ್ಚರಿಕೆ ನೀಡಿದ್ದಾರೆ. “ಕರಾವಳಿಯಲ್ಲಿ ಈ ರೀತಿಯ ಘಟನೆಗಳನ್ನು ಕೊಲೆ ಪ್ರಕರಣದಷ್ಟೇ ಗಂಭೀರವಾಗಿ ಪರಿಗಣಿಸುತ್ತೇವೆ,” ಎಂದು ಅವರು ತೀವ್ರ ಸಂದೇಶ ನೀಡಿದ್ದಾರೆ.