
ರಿಯಾದ್: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಸೌದಿ ಅರೇಬಿಯಾದಲ್ಲಿ ನೀಡಿದ ಹೇಳಿಕೆಯೊಂದು ಇದೀಗ ಭಾರೀ ವಿವಾದ ಮತ್ತು ಚರ್ಚೆಗೆ ಗ್ರಾಸವಾಗಿದೆ. ಅವರು ಪಾಕಿಸ್ತಾನ ಹಾಗೂ ಬಲೂಚಿಸ್ತಾನಗಳನ್ನು ಪ್ರತ್ಯೇಕ ದೇಶಗಳಂತೆ ಉಲ್ಲೇಖಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಸೌದಿ ಅರೇಬಿಯಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಲ್ಮಾನ್ ಖಾನ್, “ಇದೀಗ, ನೀವು ಹಿಂದಿ ಚಿತ್ರವನ್ನು ನಿರ್ಮಿಸಿ ಸೌದಿಯಲ್ಲಿ ಬಿಡುಗಡೆಗೊಳಿಸಿದರೆ, ಅದು ಸೂಪರ್‌ಹಿಟ್ ಆಗುತ್ತದೆ. ಏಕೆಂದರೆ ಸೌದಿಯಲ್ಲಿ ಬಲೂಚಿಸ್ತಾನ, ಅಫ್ಘಾನಿಸ್ತಾನ, ಪಾಕಿಸ್ತಾನದ ಜನರಿದ್ದಾರೆ… ಎಲ್ಲರೂ ಇಲ್ಲಿ ಕೆಲಸ ಮಾಡುತ್ತಿದ್ದಾರೆ,” ಎಂದು ಹೇಳಿದ್ದಾರೆ.
ಇದಕ್ಕೂ ಮುನ್ನ ಅವರು, “ಬಲೂಚಿಸ್ತಾನದ ಇತಿಹಾಸವು ದಂಗೆಗಳಿಂದಲೇ ತುಂಬಿದ್ದು, ಇದನ್ನು ಪಾಕಿಸ್ತಾನ ಸರ್ಕಾರವು, ಪ್ರಾಂತ್ಯದ ಕೆಲವು ಬುಡಕಟ್ಟು ಮುಖ್ಯಸ್ಥರ ಅಸಮಾಧಾನ ಎನ್ನುವ ರೀತಿಯಲ್ಲಿ ಚಿತ್ರಿಸಲು ಪ್ರಯತ್ನಿಸಿದೆ,” ಎಂದು ಮಾತನಾಡಿದ್ದಾರೆ.
ಪಾಕಿಸ್ತಾನದ ಪ್ರಾಂತ್ಯವಾದ ಬಲೂಚಿಸ್ತಾನವನ್ನು ಸಲ್ಮಾನ್ ಖಾನ್ ಅವರು ಪಾಕಿಸ್ತಾನದ ಜೊತೆ ಪ್ರತ್ಯೇಕವಾಗಿ ಉಲ್ಲೇಖಿಸಿರುವುದು ಉದ್ದೇಶಪೂರ್ವಕವೇ ಅಥವಾ ಬಾಯಿತಪ್ಪಿ ಬಂತೇ ಎಂಬ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಈ ಹೇಳಿಕೆಯು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.




































