
ಮೈಸೂರು: ಲೋಕಸಭಾ ಚುನಾವಣೆಯ ಟಿಕೆಟ್ ಕೈತಪ್ಪಿದ ಬಳಿಕ ಸಕ್ರಿಯ ರಾಜಕಾರಣದಿಂದ ಕೊಂಚ ದೂರವಿದ್ದ ಮಾಜಿ ಸಂಸದ ಪ್ರತಾಪಸಿಂಹ ಈಗ ರಾಜ್ಯ ರಾಜಕೀಯಕ್ಕೆ ಅದ್ಧೂರಿ ಎಂಟ್ರಿ ನೀಡಲು ಸಜ್ಜಾಗಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಭಾವಿ ವಿಧಾನಸಭಾ ಕ್ಷೇತ್ರವಾದ ಚಾಮರಾಜದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅವರು ಅಧಿಕೃತವಾಗಿ ಘೋಷಿಸಿದ್ದಾರೆ.
ಸೋಮವಾರ ಮೈಸೂರಿನಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಕೇಂದ್ರದ ಜವಾಬ್ದಾರಿ ಮುಗಿದ ಮೇಲೆ ಸಹಜವಾಗಿಯೇ ರಾಜ್ಯ ರಾಜಕಾರಣದತ್ತ ಮುಖ ಮಾಡಿದ್ದೇನೆ. ಚಾಮರಾಜ ಕ್ಷೇತ್ರವು ಪ್ರಜ್ಞಾವಂತ ಮತದಾರರಿಂದ ಕೂಡಿದ್ದು, ಇಲ್ಲಿನ ಜನರು ಅಭಿವೃದ್ಧಿ ಮತ್ತು ಕೆಲಸವನ್ನು ನೋಡಿ ಮತ ನೀಡುತ್ತಾರೆ. ಕೇವಲ ಹಣದ ಆಮಿಷಕ್ಕೆ ಒಳಗಾಗುವವರಲ್ಲ. ಹೀಗಾಗಿ ಈ ಕ್ಷೇತ್ರವು ನನ್ನ ಮೊದಲ ಆದ್ಯತೆಯಾಗಿದೆ” ಎಂದು ತಿಳಿಸಿದರು. ಈ ಹಿಂದೆ 2 ಬಾರಿ ಸಂಸದರಾಗಿ ಸೇವೆ ಸಲ್ಲಿಸಿದ್ದ ಸಿಂಹ, ಚಾಮರಾಜ ಕ್ಷೇತ್ರವು ತಮಗೆ ಎಲ್ಲ ದೃಷ್ಟಿಯಿಂದಲೂ ಪೂರಕವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.




































