
ಮಂಗಳೂರು : ಬಜಪೆಯಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಹಫ್ತಾ (ರಕ್ಷಣಾ ಹಣ) ನೀಡುವಂತೆ ಹೆದರಿಸಿ ಒತ್ತಾಯ ಮಾಡಿದ ಆರೋಪದಲ್ಲಿ, ಫಾಜಿಲ್ ಕೊಲೆ ಪ್ರಕರಣದ ಆರೋಪಿಯಾಗಿರುವ ರೌಡಿ ಶೀಟರ್ ಪ್ರಶಾಂತ್ ಅಲಿಯಾಸ್ ಪಚ್ಚು ಮತ್ತು ಆತನ ಸಹವರ್ತಿ ಅಶ್ವಿತ್ ಮೇಲೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ
ಅಕ್ಟೋಬರ್ 22ರಂದು ಪ್ರಶಾಂತ್ ಮತ್ತು ಅಶ್ವಿತ್ ಇಬ್ಬರೂ ಬಜಪೆಯಲ್ಲಿ ಪಟಾಕಿ ಅಂಗಡಿ ನಡೆಸುತ್ತಿದ್ದ ದಾಮೋದರ್ ಅವರನ್ನು ಹೆದರಿಸಿ ಹಣಕ್ಕೆ ಒತ್ತಾಯಿಸಿದ್ದಾರೆ. ಆರಂಭದಲ್ಲಿ ಭಯಭೀತರಾಗಿದ್ದ ವ್ಯಾಪಾರಸ್ಥರು ದೂರು ನೀಡಿರಲಿಲ್ಲ. ಆದರೆ, ಪೊಲೀಸರು ರಕ್ಷಣೆ ಭರವಸೆ ನೀಡಿ ಧೈರ್ಯ ತುಂಬಿದ ನಂತರ, ಅಕ್ಟೋಬರ್ 23 ರಂದು ದಾಮೋದರ್ ಅವರು ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.
ರೌಡಿ ಶೀಟರ್ ಪ್ರಶಾಂತ್ ಇತ್ತೀಚೆಗೆ ಕೊಲೆಯಾದ ಸುಹಾಸ್ ಶೆಟ್ಟಿ ಅವರ ಸಹವರ್ತಿಯಾಗಿದ್ದು, ಬಜಪೆಯಲ್ಲಿ ರೌಡಿ ಶೀಟರ್ ಆಗಿದ್ದಾನೆ. ಆದರೆ, ಆತನ ಸಹವರ್ತಿ ಅಶ್ವಿತ್‌ಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಕಮಿಷನರ್ ಖಡಕ್ ಎಚ್ಚರಿಕೆ
ಈ ಘಟನೆಯ ಹಿನ್ನೆಲೆಯಲ್ಲಿ ನಗರದ ಕಾನೂನು-ವ್ಯವಸ್ಥೆಯ ಬಗ್ಗೆ ಚರ್ಚೆಗಳು ನಡೆಯುತ್ತಿದ್ದಾಗ, ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರು ರೌಡಿಗಳಿಗೆ ಮತ್ತು ಅವರ ಸಹವರ್ತಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
“ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಜೊತೆಗೆ ತಿರುಗಾಡದಂತೆ ಈ ಮೊದಲೇ ಹೇಳಿದ್ದೆ. ರೌಡಿಗಳ ಜೊತೆಗಿದ್ದು ಅಪರಾಧದಲ್ಲಿ ಸಿಲುಕಬೇಡಿ ಎಂದೂ ಹೇಳಿದ್ದೆ. ನೀವು ನಮ್ಮ ಮಾತು ಕೇಳುತ್ತಿಲ್ಲ ಎನಿಸುತ್ತಿದೆ. ನಮ್ಮ ಮಾತು ಕೇಳಲ್ಲಾ ಅಂದ್ರೆ ನಾವು ಏನು ಮಾಡಬೇಕು ಎಂದು ಗೊತ್ತಿದೆ. ನಾವು ನಮ್ಮ ಕೆಲಸ ಮಾಡ್ತೀವಿ. ನಿಮ್ಮ ಇಷ್ಟದಂತೆ ಮಾಡ್ಕೊಂಡ್ರೆ ನಮಗೇನೂ ತೊಂದರೆ ಇಲ್ಲ, ಏನು ಬೇಕಾದರೂ ಮಾಡ್ಕೊಂಡು ಹೋಗಿ. ಪೊಲೀಸರು ತಮ್ಮ ಕೆಲಸ ಮಾಡುತ್ತಾರೆ,” ಎಂದು ಸುಧೀರ್ ರೆಡ್ಡಿ ತೀಕ್ಷ್ಣವಾಗಿ ಎಚ್ಚರಿಸಿದ್ದಾರೆ.




































