
ಹೊಸದಿಲ್ಲಿ: ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ನಡೆದ ಮಹತ್ವದ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (BNP) ಭರ್ಜರಿ ಜಯ ದಾಖಲಿಸಿದೆ. ಈ ಐತಿಹಾಸಿಕ ವಿಜಯದ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬಿಎನ್‌ಪಿ ನಾಯಕ ತಾರಿಕ್ ರೆಹಮಾನ್ ಅವರಿಗೆ ಶುಕ್ರವಾರ (ಫೆಬ್ರವರಿ 13) ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪ್ರಜಾಸತ್ತಾತ್ಮಕ ಮೌಲ್ಯಗಳ ಪರವಾಗಿ ನಿಲ್ಲುವ ಬಾಂಗ್ಲಾದೇಶಕ್ಕೆ ಭಾರತದ ಸಂಪೂರ್ಣ ಬೆಂಬಲ ಸದಾ ಇರಲಿದೆ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಬಾಂಗ್ಲಾದೇಶದ ಸಂಸತ್ ಚುನಾವಣೆಯಲ್ಲಿ ಬಿಎನ್‌ಪಿ ಪಕ್ಷವನ್ನು ಅಭೂತಪೂರ್ವ ಗೆಲುವಿನತ್ತ ಮುನ್ನಡೆಸಿದ ತಾರಿಕ್ ರೆಹಮಾನ್ ಅವರಿಗೆ ಅಭಿನಂದನೆಗಳು. ಅಲ್ಲಿನ ಜನತೆ ನಿಮ್ಮ ನಾಯಕತ್ವದ ಮೇಲೆ ಇಟ್ಟಿರುವ ಅಚಲ ವಿಶ್ವಾಸಕ್ಕೆ ಈ ಫಲಿತಾಂಶವೇ ಸಾಕ್ಷಿ” ಎಂದು ಶ್ಲಾಘಿಸಿದ್ದಾರೆ. ಅಲ್ಲದೆ, ಪ್ರಗತಿಪರ ಹಾಗೂ ಎಲ್ಲರನ್ನೂ ಒಳಗೊಳ್ಳುವ ಬಾಂಗ್ಲಾದೇಶದ ನಿರ್ಮಾಣದಲ್ಲಿ ಭಾರತವು ಸಕ್ರಿಯ ಪಾಲುದಾರನಾಗಿ ಮುಂದುವರಿಯಲಿದೆ ಮತ್ತು ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ತಾವು ಉತ್ಸುಕರಾಗಿರುವುದಾಗಿ ತಿಳಿಸಿದ್ದಾರೆ.
ಬಾಂಗ್ಲಾದೇಶದ ಚುನಾವಣಾ ಆಯೋಗವು ಅಂತಿಮ ಫಲಿತಾಂಶಗಳನ್ನು ಅಧಿಕೃತವಾಗಿ ಘೋಷಿಸಬೇಕಿದ್ದರೂ, ಲಭ್ಯವಿರುವ ಮಾಹಿತಿಯ ಪ್ರಕಾರ ಬಿಎನ್‌ಪಿ ಈಗಾಗಲೇ ಮ್ಯಾಜಿಕ್ ನಂಬರ್ 151 ರ ಗಡಿಯನ್ನು ದಾಟಿ ಸ್ಪಷ್ಟ ಬಹುಮತ ಗಳಿಸಿದೆ. ಪ್ರಧಾನಿ ಮೋದಿಯವರ ಈ ಆಶಯದ ಪೋಸ್ಟ್ ಅನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮರುಹಂಚಿಕೊಂಡಿದ್ದಾರೆ. ಪ್ರಜಾಪ್ರಭುತ್ವದ ಮರುಸ್ಥಾಪನೆಯ ಹಾದಿಯಲ್ಲಿರುವ ಬಾಂಗ್ಲಾದೇಶದೊಂದಿಗೆ ಹೊಸ ರಾಜತಾಂತ್ರಿಕ ಅಧ್ಯಾಯ ಆರಂಭಿಸಲು ಭಾರತ ಸಜ್ಜಾಗಿದೆ.




































