
ಪಾಲ್ಕಾಡ್ (ಕೇರಳ): ರೈಲು ನಿಲ್ದಾಣದಲ್ಲಿ ರೈಲಿಗಾಗಿ ಕಾಯುತ್ತ ಕುಳಿತಿದ್ದ ಯುವ ಪ್ರಯಾಣಿಕನೊಬ್ಬ ಆಕಳಿಸಿದ ಬಳಿಕ ಬಾಯಿಯನ್ನು ಮುಚ್ಚಲಾಗದೆ ಪರದಾಡಿದ ವಿಚಿತ್ರ ಘಟನೆ ಪಾಲ್ಕಾಡ್ ರೈಲು ನಿಲ್ದಾಣದಲ್ಲಿ ನಡೆದಿದೆ. ಈ ಕುರಿತಾದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರೈಲು ನಿಲ್ದಾಣದಲ್ಲಿ ಕುಳಿತಿದ್ದ ಈ ಯುವಕ ಆಕಳಿಸಿದ ಬಳಿಕ ಬಾಯಿ ಮುಚ್ಚಲು ಸಾಧ್ಯವಾಗದೆ ನೋವಿನಿಂದ ಬಳಲುತ್ತಾ ಪರದಾಡಿದ್ದಾನೆ. ಇದನ್ನು ಗಮನಿಸಿದ ರೈಲ್ವೆ ಸಿಬ್ಬಂದಿ ತಕ್ಷಣ ವೈದ್ಯಕೀಯ ನೆರವು ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ವೈದ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯುವಕನಿಗೆ ಚಿಕಿತ್ಸೆ ನೀಡಿದ್ದಾರೆ. ಯುವಕನ ಬಾಯಿ ಮುಚ್ಚಲು (ತಾತ್ಕಾಲಿಕ ಜಡತ್ವಕ್ಕೆ ಒಳಗಾಗಿದ್ದ ದವಡೆಗೆ) ನೆರವಾಗಿದ್ದಾರೆ. ಆಕಳಿಕೆ ಸಂದರ್ಭದಲ್ಲಿ ದವಡೆ ಸ್ಥಾನಪಲ್ಲಟಗೊಂಡಾಗ (Dislocation) ಈ ರೀತಿಯಾಗುವ ಸಾಧ್ಯತೆಗಳಿರುತ್ತವೆ.
ಸಮಯಪ್ರಜ್ಞೆ ಮೆರೆದು ತಕ್ಷಣ ವೈದ್ಯಕೀಯ ಸೇವೆ ನೀಡಿದ ರೈಲ್ವೆ ಇಲಾಖೆಯ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.




































