
ಬೆಂಗಳೂರು: ಕೇಂದ್ರ ಸರ್ಕಾರ ಇತ್ತೀಚೆಗೆ ಜಿಎಸ್‌ಟಿ ದರಗಳನ್ನು ಪರಿಷ್ಕರಿಸಿದ್ದು, ಹಲವು ಅಗತ್ಯ ವಸ್ತುಗಳ ಬೆಲೆ ಇಳಿಕೆಯಾಗಿದೆ. ಆದರೆ ಕರ್ನಾಟಕದ ಜನಪ್ರಿಯ ಬ್ರ್ಯಾಂಡ್ ನಂದಿನಿ ಹಾಲು ಮತ್ತು ಮೊಸರಿನ ದರ ಮಾತ್ರ ಇಳಿಕೆಯಾಗಿಲ್ಲ. ಈ ಬಗ್ಗೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಸ್ಪಷ್ಟನೆ ನೀಡಿದೆ.
ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು, ಹಾಲು ಮತ್ತು ಮೊಸರು ಹೊರತುಪಡಿಸಿ ಉಳಿದ ನಂದಿನಿ ಉತ್ಪನ್ನಗಳ ಬೆಲೆಯನ್ನು ಇಳಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. “ಕೇಂದ್ರ ಸರ್ಕಾರ ನೀಡಿರುವ ಸೂಚನೆಗಳ ಪ್ರಕಾರವೇ ನಾವು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವೆ” ಎಂದು ಹೇಳಿದರು.
ಹಾಲು ಮತ್ತು ಮೊಸರಿಗೆ ಜಿಎಸ್‌ಟಿ ಅನ್ವಯಿಸುವುದಿಲ್ಲ
ನಂದಿನಿ ಹಾಲು ಮತ್ತು ಮೊಸರಿಗೆ ಜಿಎಸ್‌ಟಿ ಅನ್ವಯಿಸುವುದಿಲ್ಲ, ಬದಲಾಗಿ ಪ್ಯಾಕ್ ಮಾಡಿದ ಹಾಗೂ ಲೇಬಲ್ ಮಾಡಲಾದ ಮೊಸರಿಗೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತದೆ. ಈ ಕಾರಣದಿಂದ ಹಾಲು ಮತ್ತು ಮೊಸರಿನ ದರವನ್ನು ಕಡಿತಗೊಳಿಸಲು ಸಾಧ್ಯವಾಗಿಲ್ಲ ಎಂದು ಕೆಎಂಎಫ್ ಸ್ಪಷ್ಟಪಡಿಸಿದೆ.
ಬೆಲೆ ಇಳಿಕೆ ಕುರಿತು ಕೆಎಂಎಫ್‌ನ ಭರವಸೆ:
ಇದೇ ವೇಳೆ, ಜಿಎಸ್‌ಟಿ ಕಡಿತಗೊಂಡಿರುವ ಉತ್ಪನ್ನಗಳನ್ನು ಗ್ರಾಹಕರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಕೆಎಂಎಫ್ ವಹಿಸಿಕೊಂಡಿದೆ. “ಯಾವುದಾದರೂ ದೂರು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಉತ್ಪನ್ನದ MRP ಏನೇ ಇರಲಿ, ಜಿಎಸ್‌ಟಿ ಕಡಿತಗೊಂಡ ದರದ ಆಧಾರದ ಮೇಲೆ ಮಾತ್ರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೇವೆ” ಎಂದು ಅವರು ಭರವಸೆ ನೀಡಿದ್ದಾರೆ.
































