
ಮಹಾರಾಷ್ಟ್ರ: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ವರದಿಯಾಗಿದ್ದು, ಕೇವಲ 4 ತಿಂಗಳ ಹಸುಗೂಸನ್ನು ತಂದೆಯೇ ನೀರಿನ ಡ್ರಮ್‌ನಲ್ಲಿ ಮುಳುಗಿಸಿ ಕೊಲೆಗೈದು ನಂತರ ತಾನೂ ಬದುಕಿಗೆ ಅಂತ್ಯ ಹಾಡಿದ್ದಾನೆ. ಬೀಡ್ ಜಿಲ್ಲೆಯ ಜಿಯೋರೈ ತಾಲ್ಲೂಕಿನ ತಲ್ವಾಡಾ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ.
ತನ್ನ ನಾಲ್ಕು ತಿಂಗಳ ಮಗನನ್ನು ಅರ್ಧ ತುಂಬಿದ ನೀರಿನ ಡ್ರಮ್‌ಗೆ ಎಸೆದು ಸಾಯಿಸಿದ ನಂತರ, ತಂದೆ ಅಮೋಲ್ ಸೋನಾವಾನೆ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಘಟನೆಯ ಸ್ಥಳದ ಚಿತ್ರಗಳು ಹೃದಯ ವಿದ್ರಾವಕವಾಗಿದ್ದವು. ಡೈಪರ್ ಮತ್ತು ಗುಲಾಬಿ ಬಣ್ಣದ ಟಿ-ಶರ್ಟ್ ಧರಿಸಿದ್ದ ಮಗುವಿನ ದೇಹವು ಡ್ರಮ್‌ನ ನೀರಿನಲ್ಲಿ ಮುಖ ಕೆಳಗೆ ಮಾಡಿತ್ತು. ಮಗುವಿನ ಪಕ್ಕದಲ್ಲಿ ಪ್ಲಾಸ್ಟಿಕ್‌ನ ಗುಲಾಬಿ ಮಗ್ ಒಂದು ತೇಲುತ್ತಿರುವುದು ಕಂಡುಬಂದಿದೆ.
ಪೊಲೀಸರ ಮಾಹಿತಿ ಪ್ರಕಾರ, ಅಮೋಲ್ ಸೋನಾವಾನೆ ಈ ಹಿಂದೆಯೂ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಇತಿಹಾಸ ಹೊಂದಿದ್ದಾನೆ. ಕೆಲವು ದಿನಗಳ ಹಿಂದೆ, ಅಮೋಲ್ ಮತ್ತು ಆತನ ಪತ್ನಿ ಕುಟುಂಬ ಕಲಹದಿಂದ ಬೇಸತ್ತು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಆದರೆ, ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಿದ ಕಾರಣ ಅವರ ಪ್ರಾಣ ಉಳಿಸಲಾಗಿತ್ತು. ಗುರುವಾರವಷ್ಟೇ ದಂಪತಿ ಸ್ಥಳೀಯ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಈಗ, ಅಮೋಲ್ ಮತ್ತು ಆತನ ಪುತ್ರನ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಲ್ವಾರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ. ಈ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.




































