
ಬೆಂಗಳೂರಿನ ಪ್ರಸಿದ್ಧ ಐತಿಹಾಸಿಕ ತಾಣವಾದ ಲಾಲ್ ಬಾಗ್‌ನ ಸಮಗ್ರ ಅಭಿವೃದ್ಧಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು 10 ಕೋಟಿ ರೂಪಾಯಿಗಳ ಬೃಹತ್ ಅನುದಾನವನ್ನು ಘೋಷಿಸಿದ್ದಾರೆ. ಬೆಂಗಳೂರು ಮಹಾನಗರ ವತಿಯಿಂದ (ಜಿಬಿಎ) ಈ ಹಣವನ್ನು ಒದಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶನಿವಾರ ಬೆಳಿಗ್ಗೆ ಲಾಲ್ ಬಾಗ್ ಉದ್ಯಾನವನದಲ್ಲಿ ನಾಗರಿಕರೊಂದಿಗೆ ಕಾಲ್ನಡಿಗೆ ಮತ್ತು ಸಂವಾದ ಕಾರ್ಯಕ್ರಮವನ್ನು ನಡೆಸಿದ ನಂತರ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಅವರು ಟನಲ್ ರಸ್ತೆಯ ಪ್ರವೇಶ ಜಾಗವನ್ನು ಕೂಡ ಪರಿಶೀಲಿಸಿದರು.
ಸಾರ್ವಜನಿಕರ ಸಲಹೆ, ದೂರುಗಳಿಗೆ ಸ್ಪಂದನೆ: ಈ ಸಂವಾದದ ವೇಳೆ ಅನೇಕ ಸಾರ್ವಜನಿಕರ ಅಭಿಪ್ರಾಯಗಳನ್ನು ಮತ್ತು ದೂರುಗಳನ್ನು ಆಲಿಸಲಾಗಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಭರವಸೆ ನೀಡಿದರು. ಉದ್ಯಾನವನಕ್ಕೆ ಬರುವ ಹಿರಿಯ ನಾಗರಿಕರು ಮತ್ತು ಮಹಿಳೆಯರ ಅನುಕೂಲಕ್ಕಾಗಿ ಜಿಮ್ ಸೌಲಭ್ಯವನ್ನು ಕೂಡ ಶೀಘ್ರದಲ್ಲಿಯೇ ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ಲಾಲ್ ಬಾಗ್ ಮಾದರಿಯಲ್ಲಿ ‘ಟ್ರೀ ಪಾರ್ಕ್’ಗಳು: ಬೆಂಗಳೂರಿನಲ್ಲಿ ಎಲ್ಲೆಲ್ಲಿ ಸೂಕ್ತ ಅವಕಾಶವಿದೆಯೋ ಅಲ್ಲೆಲ್ಲಾ ಲಾಲ್ ಬಾಗ್‌ನಂತೆಯೇ ‘ಟ್ರೀ ಪಾರ್ಕ್’ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದರು. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಚರ್ಚೆ ನಡೆಸುವುದಾಗಿ ಮತ್ತು ಈ ಯೋಜನೆಗೆ ಅಗತ್ಯವಿರುವ ಆರ್ಥಿಕ ನೆರವನ್ನು ಸರ್ಕಾರದಿಂದ ಒದಗಿಸಲಾಗುವುದು ಎಂದು ತಿಳಿಸಿದರು.
ಉಚಿತ ಶೌಚಾಲಯ ಮತ್ತು ಆರೋಗ್ಯ ಸೇವೆಗಳು: ಉದ್ಯಾನವನಕ್ಕೆ ಭೇಟಿ ನೀಡುವ ನಾಗರಿಕರ ಅನುಕೂಲಕ್ಕಾಗಿ ಇನ್ನು ಮುಂದೆ ಶೌಚಾಲಯಗಳ ಸೌಲಭ್ಯವನ್ನು ಉಚಿತವಾಗಿ ಒದಗಿಸಲಾಗುತ್ತದೆ. ಜೊತೆಗೆ, ಇಲ್ಲಿಗೆ ಬರುವವರಿಗೆ ಯಾವುದೇ ತುರ್ತು ಪರಿಸ್ಥಿತಿಯಾದರೆ, ಬೆಳಿಗ್ಗೆಯಿಂದ ಸಂಜೆಯವರೆಗೆ ವೈದ್ಯರು ಮತ್ತು ಆಂಬುಲೆನ್ಸ್ ಸೇವೆಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ.
ಟನಲ್ ರಸ್ತೆ ಪ್ರವೇಶಕ್ಕೆ ಸ್ಪಷ್ಟನೆ: ಬೆಂಗಳೂರು ಕಸ ವಿಲೇವಾರಿ, ವಾಹನ ನಿಲುಗಡೆ ಮತ್ತು ಇತರೆ ಸಮಸ್ಯೆಗಳ ಕುರಿತು ನಾಗರಿಕರು ನೀಡಿದ ಸಲಹೆಗಳನ್ನು ಸ್ವಾಗತಿಸಿದ ಡಿಸಿಎಂ, ಲಾಲ್ ಬಾಗ್ ಸಾರ್ವಜನಿಕರ ಆಸ್ತಿ ಎಂದು ಪುನರುಚ್ಚರಿಸಿದರು. ಟನಲ್ ರಸ್ತೆ ಯೋಜನೆ ಕುರಿತು ಇದ್ದ ಆತಂಕಗಳಿಗೆ ಸ್ಪಷ್ಟನೆ ನೀಡಿದ ಅವರು, ಉದ್ಯಾನದ 6 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ಕೇವಲ ಅರ್ಧ ಎಕರೆ ಪ್ರದೇಶವನ್ನು ಅಶೋಕ ಪಿಲ್ಲರ್‌ನ ಕಡೆಗೆ ಟನಲ್ ರಸ್ತೆಯ ಪ್ರವೇಶ ಮತ್ತು ನಿರ್ಗಮನಕ್ಕೆ ಬಳಸಿಕೊಳ್ಳಲಾಗುತ್ತದೆ.
ಸದ್ಯ ಪಾರ್ಕಿಂಗ್‌ಗೆ ಬಳಸುತ್ತಿರುವ ಜಾಗದಲ್ಲಿ ಸುಮಾರು 1 ಎಕರೆ ಪ್ರದೇಶವನ್ನು ತಾತ್ಕಾಲಿಕವಾಗಿ ಸ್ಟೋರೇಜ್‌ಗಾಗಿ ಉಪಯೋಗಿಸಿ, ನಂತರ ಅದನ್ನು ತೆರವುಗೊಳಿಸಿ ಲಾಲ್ ಬಾಗ್‌ಗೆ ಹಿಂದಿರುಗಿಸಲಾಗುವುದು. ಸಣ್ಣ ಗಿಡಗಳನ್ನು ಮಾತ್ರ ತೆರವುಗೊಳಿಸಿ, ಹೊಸ ಗಿಡಗಳನ್ನು ನೆಡಲಾಗುವುದು ಮತ್ತು ಉದ್ಯಾನವನಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಸ ವಿಲೇವಾರಿ ಮತ್ತು ಪಾರ್ಕ್ ಪರಿಶೀಲನೆ: ಯೋಜನೆಗಳ ಟೆಂಡರ್ ಪ್ರಕ್ರಿಯೆಗೆ ಕರೆ ನೀಡಲಾಗಿದ್ದು, ಉತ್ತಮ ಬಿಡ್ಡಿಂಗ್ ಮಾಡಿದವರಿಗೆ ಟೆಂಡರ್ ನೀಡಲಾಗುವುದು ಎಂದು ಡಿಸಿಎಂ ತಿಳಿಸಿದರು. ಇನ್ನು ಮುಂದೆ ಎಲ್ಲಾ ಪಾಲಿಕೆ ವ್ಯಾಪ್ತಿಯ ಉದ್ಯಾನಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು ಎಂದರು. ಬೆಂಗಳೂರಿನ ಕಸದ ಸಮಸ್ಯೆ ನಿವಾರಣೆ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, ಕಸದ ‘ಬ್ಲಾಕ್ ಸ್ಪಾಟ್’ಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಿ ಸಮಸ್ಯೆ ಪರಿಹರಿಸಲು ಸೂಚಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
































