
ಉಡುಪಿ : ಬ್ರಿಟಿಷರ ಆಡಳಿತ ಕಾಲದಲ್ಲೇ ಅಡಿಪಾಯ ಹಾಕಿದ ಕುದಿ ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಕೊಡಿಬೆಟ್ಟು, ಇದೀಗ ತನ್ನ 100 ನೇ ವರ್ಷದ ಮೈಲಿಗಲ್ಲನ್ನು ತಲುಪಿದ್ದು, ಎಪ್ರಿಲ್ 11 ಮತ್ತು 12 ರಂದು ಅದ್ಧೂರಿ ಶತಮಾನೋತ್ಸವ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ.
1925 ರಲ್ಲಿ ದಿ. ಶಂಕರನಾರಾಯಣ ಸಾಮಗ ಅವರಿಂದ ಸ್ಥಾಪಿಸಲ್ಪಟ್ಟ ಈ ವಿದ್ಯಾಸಂಸ್ಥೆಯು ಒಂದು ಶತಮಾನದ ಸುದೀರ್ಘ ಇತಿಹಾಸವನ್ನು ಹೊಂದಿದೆ. ಆರಂಭದಲ್ಲಿ ಪೆರ್ಣಂಕಿಲ ದಿ. ರಂಗಪ್ಪ ನಾಯಕ್ ಅವರ ಸಾರಥ್ಯದಲ್ಲಿದ್ದ ಶಾಲೆಯು, ನಂತರದ ದಿನಗಳಲ್ಲಿ ಹೇಮಮಜಲು ದಿ. ರಂಗಪ್ಪ ನಾಯಕ್ ಅವರ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆಯಿತು. ಅಂದು 10 ಮಂದಿ ಶಿಕ್ಷಕರಿಂದ ಕಳೆಗಟ್ಟಿದ್ದ ಈ ಶಾಲೆಯಲ್ಲಿ ಪ್ರಸ್ತುತ ಒಬ್ಬರೇ ಶಿಕ್ಷಕರಿದ್ದರೂ ಊರ ಹಾಗೂ ಪರವೂರ ದಾನಿಗಳ ನಿರಂತರ ಸಹಕಾರದಿಂದಾಗಿ ಈ ಜ್ಞಾನ ದೇಗುಲವು ಒಂದು ಶತಮಾನವನ್ನು ಯಶಸ್ವಿಯಾಗಿ ಪೂರೈಸಿದೆ. ಶಾಲೆಯ ಪರಂಪರೆಯನ್ನು ಉಳಿಸುವ ಹಠದೊಂದಿಗೆ ಎಲ್ಲರೂ ಶತಮಾನೋತ್ಸವ ಆಚರಿಸಲು ಮುಂದಾಗಿದ್ದಾರೆ. ಎಂದು ಶಾಲಾ ಸಂಚಾಲಕಿ ಪಾರ್ವತಿ ಚಂದ್ರ ಶೇಖರ ನಾಯಕ್, ಶತಮಾನೋತ್ಸವ ಸಮಿತಿ ಅಧ್ಯಕ್ಷ ರಾಮಕೃಷ್ಣ ಪ್ರಭು, ಕೋಶಾಧಿಕಾರಿ ಉಪೇಂದ್ರ ನಾಯಕ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಆಚಾರ್ಯ, ಮುಖ್ಯೋಪಾಧ್ಯಾಯಿನಿ ವಿದ್ಯಾ ಕೆ. ಅವರು ತಿಳಿಸಿದ್ದಾರೆ.




































