
ಬೆಂಗಳೂರು: ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ 10.15ಕ್ಕೆ ರಾಜ್ಯದ 2026-27ನೇ ಸಾಲಿನ ಆಯವ್ಯಯವನ್ನು ಮಂಡಿಸಲಿದ್ದಾರೆ. ಇದು ಸಿದ್ದರಾಮಯ್ಯ ಅವರ ವೃತ್ತಿಜೀವನದ 17ನೇ ಬಜೆಟ್ ಆಗಿದ್ದು, ದೇಶದಲ್ಲೇ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಎರಡನೇ ಹಣಕಾಸು ಸಚಿವ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ. ಗುಜರಾತ್‌ನ ವಜುಭಾಯ್ ವಾಲಾ (18 ಬಾರಿ) ಅವರ ನಂತರದ ಸ್ಥಾನ ಈಗ ಸಿದ್ದರಾಮಯ್ಯ ಅವರದ್ದಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ರಾಜಕಾರಣದಲ್ಲಿ ಕೇಳಿಬರುತ್ತಿರುವ ನಾಯಕತ್ವ ಬದಲಾವಣೆಯ ಅನಿಶ್ಚಿತತೆಯ ನಡುವೆಯೇ ಈ ಬಜೆಟ್ ಮಂಡನೆಯಾಗುತ್ತಿರುವುದು ವಿಶೇಷ. ಒಂದು ಕಡೆ ಪಂಚ ಗ್ಯಾರಂಟಿ ಯೋಜನೆಗಳಿಗೆ ಬೇಕಾದ ಸುಮಾರು 56,000 ಕೋಟಿ ರೂ.ಗಳ ಬೃಹತ್ ಮೊತ್ತ, ಮತ್ತೊಂದೆಡೆ ಏರುತ್ತಿರುವ ಸಾಲದ ಹೊರೆ – ಇವೆರಡರ ನಡುವೆ ರಾಜ್ಯದ ಆರ್ಥಿಕತೆಯನ್ನು ಸರಿದೂಗಿಸುವುದು ಸಿಎಂ ಪಾಲಿಗೆ ಅಗ್ನಿಪರೀಕ್ಷೆಯಾಗಿದೆ. ಕಳೆದ ವರ್ಷದ ಬಜೆಟ್‌ನಲ್ಲಿ ಒಟ್ಟು ಹೊಣೆಗಾರಿಕೆ 7,64,655 ಕೋಟಿ ರೂ. ತಲುಪಿದ್ದು, ವಿತ್ತೀಯ ಶಿಸ್ತಿನ ಮಿತಿಯಾದ ಶೇ. 24.91ಕ್ಕೆ ಬಂದು ನಿಂತಿತ್ತು. ಈ ಬಾರಿ ಈ ಮಿತಿ ದಾಟಲಿದೆಯೇ ಎಂಬ ಆತಂಕ ಆರ್ಥಿಕ ವಲಯದಲ್ಲಿದೆ.
ಕೇಂದ್ರ ಸರ್ಕಾರದೊಂದಿಗೆ ರಾಜ್ಯದ ತೆರಿಗೆ ಪಾಲಿನ ವಿಚಾರದಲ್ಲಿ ಸದಾ ಸಂಘರ್ಷಕ್ಕಿಳಿಯುವ ಸಿದ್ದರಾಮಯ್ಯ, ಈ ಬಾರಿಯೂ 16ನೇ ಹಣಕಾಸು ಆಯೋಗದ ಶಿಫಾರಸುಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆಯಿದೆ. ತೆರಿಗೆ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಬಜೆಟ್ ಭಾಷಣದಲ್ಲಿ ಪ್ರಸ್ತಾಪವಾಗುವ ನಿರೀಕ್ಷೆಯಿದೆ. ಇದರೊಂದಿಗೆ, ತಮ್ಮ ರಾಜಕೀಯ ಭದ್ರಕೋಟೆಯಾಗಿರುವ ‘ಅಹಿಂದ’ ಮತಬ್ಯಾಂಕ್ ಗಟ್ಟಿಯಾಗಿಟ್ಟುಕೊಳ್ಳಲು ಈ ವರ್ಗವನ್ನು ಓಲೈಸಲು ಈ ಬಾರಿಯ ಬಜೆಟ್‌ನಲ್ಲಿ ವಿಶೇಷ ಕೊಡುಗೆಗಳು ಮತ್ತು ಹೆಚ್ಚಿನ ಅನುದಾನವನ್ನು ಘೋಷಿಸುವ ಮೂಲಕ ತಮ್ಮ ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಿಸಲು ಸಿಎಂ ಮುಂದಾಗಿದ್ದಾರೆ ಎನ್ನಲಾಗಿದೆ.




































