
ಕಲಬುರಗಿ : ಬಾಗಲಕೋಟೆಯ ಕೋಮು ಸಂಘರ್ಷದ ಬೆನ್ನಲ್ಲೇ ಇದೀಗ ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರ್ ಗ್ರಾಮದಲ್ಲಿಯೂ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು ಸಂಘರ್ಷಕ್ಕೆ ತಿರುಗಿದ ಘಟನೆ ವರದಿಯಾಗಿದೆ.
ರಾವೂರ್ ಗ್ರಾಮದ ಗೋಕುಲ ನಗರದ ಗಣೇಶ್ ಕಟ್ಟೆಯ ಬಳಿ ಶಿವಾಜಿ ಮಹಾರಾಜರ ಭಾವಚಿತ್ರವನ್ನಿಟ್ಟು ಪೂಜೆ ಸಲ್ಲಿಸಿ, ನೃತ್ಯ ಮಾಡುತ್ತಾ ಸಂಭ್ರಮಿಸಲಾಗುತ್ತಿತ್ತು. ಈ ವೇಳೆ ಸೌಂಡ್ ಬಾಕ್ಸ್‌ನ ಶಬ್ದವನ್ನು ಕಡಿಮೆ ಮಾಡುವಂತೆ ಮತ್ತೊಂದು ಸಮುದಾಯದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವು ಮಾತಿಗೆ ಮಾತು ಬೆಳೆದು, ಅಂತಿಮವಾಗಿ ಎರಡೂ ಗುಂಪುಗಳು ಪರಸ್ಪರ ಕಲ್ಲು ಹಾಗೂ ಕಟ್ಟಿಗೆಗಳಿಂದ ಹಲ್ಲೆ ಮಾಡಿಕೊಂಡಿವೆ. ಈ ಗಲಾಟೆಯಲ್ಲಿ 3 ರಿಂದ 4 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಎರಡೂ ಸಮುದಾಯಗಳ ಪ್ರಮುಖರನ್ನು ಕರೆಸಿ ಸಂಧಾನ ಮಾಡಿಸಲಾಗಿದ್ದು, ಈವರೆಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.




































