
ರಾಮನಗರ: ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾಲಿವುಡ್ ಸ್ಟುಡಿಯೋಗೆ ಬೀಗಮುದ್ರೆ ಹಾಕಿರುವ ಬೆನ್ನಲ್ಲೇ, ಸ್ಟುಡಿಯೋ ಆಡಳಿತ ಮಂಡಳಿಯು ಬುಧವಾರ (ಅಕ್ಟೋಬರ್ 8) ನ್ಯಾಯಾಲಯದಲ್ಲಿ ಜಿಲ್ಲಾಡಳಿತದ ಕ್ರಮದ ವಿರುದ್ಧ ತಡೆಯಾಜ್ಞೆಗೆ ಮುಂದಾಗಲಿದೆ.
ನ್ಯಾಯಾಲಯದಲ್ಲಿ ಜಾಲಿವುಡ್ ಸ್ಟುಡಿಯೋಗೆ ಅನುಕೂಲಕರವಾದ ಆದೇಶ ದೊರೆತಲ್ಲಿ, ಒಂದೆರಡು ದಿನಗಳೊಳಗೆ ಹಾಲಿ ಸೆಟ್‌ನಲ್ಲೇ ಬಿಗ್‌ಬಾಸ್ ಸೀಸನ್ 12 ರ ಚಿತ್ರೀಕರಣ ಮುಂದುವರಿಯಲಿದೆ. ಒಂದು ವೇಳೆ ಕೋರ್ಟ್‌ನಲ್ಲಿ ರಿಲೀಫ್ ಸಿಗದಿದ್ದಲ್ಲಿ, ಬಿಗ್‌ಬಾಸ್ ಕಾರ್ಯಕ್ರಮಕ್ಕೆ ಹೊಸ ಸೆಟ್ ನಿರ್ಮಿಸಬೇಕಾಗಿದ್ದು, ಇದಕ್ಕೆ ಸಮಯಾವಕಾಶ ಬೇಕಿರುವುದರಿಂದ ಕಾರ್ಯಕ್ರಮ ಸ್ವಲ್ಪ ತಡವಾಗಲಿದೆ.
ಪ್ರಸ್ತುತ ಜಾಲಿವುಡ್ ಸ್ಟುಡಿಯೋಗೆ ಬೀಗಮುದ್ರೆ ಹಾಕಿರುವ ಜೊತೆಗೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಸಹ ಕಡಿತಗೊಂಡಿರುವುದರಿಂದ ಬಿಡದಿ ಬಳಿಯ ಕೋಟ್ಯಂತರ ರೂ. ವೆಚ್ಚದ ಬಿಗ್‌ಬಾಸ್ ಸೆಟ್ ಖಾಲಿ ಖಾಲಿ ಎನಿಸುತ್ತಿದ್ದು, ಕಾರ್ಯಕ್ರಮದ ಮುಂದಿನ ಕತೆ ಏನು ಎಂಬ ಪ್ರಶ್ನೆ ನಿರ್ಮಾಣವಾಗಿದೆ.
ಸ್ಪರ್ಧಿಗಳ ರಹಸ್ಯ ಸ್ಥಳಾಂತರ: ಕಾರು ಪಂಕ್ಚರ್ ಪ್ರಸಂಗ
ಸ್ಟುಡಿಯೋ ಸೀಜ್ ಆಗುತ್ತಿದ್ದಂತೆ ಬಿಗ್‌ಬಾಸ್‌ನ ಎಲ್ಲಾ 17 ಮಂದಿ ಸ್ಪರ್ಧಿಗಳನ್ನು ರಹಸ್ಯವಾಗಿ ಸ್ಥಳಾಂತರಿಸಲಾಯಿತು. ಸ್ಪರ್ಧಿಗಳನ್ನು ಕರೆದುಕೊಂಡು ಹೋಗುವಾಗ ಚನ್ನಪಟ್ಟಣದ ಬಳಿ ಒಂದು ಕಾರು ಪಂಕ್ಚರ್ ಆದ ಕಾರಣ, ಕೆಲಕಾಲ ರಸ್ತೆಯಲ್ಲೇ ಸ್ಪರ್ಧಿಗಳು ನಿಲ್ಲುವಂತಾಗಿತ್ತು. ಬಳಿಕ ಬೇರೆ ಕಾರುಗಳಲ್ಲಿ ಅವರನ್ನು ಸ್ಥಳಾಂತರಿಸಲಾಯಿತು.
ಸ್ಪರ್ಧಿಗಳಿರುವ ಸ್ಥಳದ ಬಗ್ಗೆ ನಿಗೂಢತೆಯನ್ನು ಕಾಯ್ದುಕೊಂಡಿದ್ದ ಆಯೋಜಕರು, ಕೊನೆಗೆ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈಗಲ್‌ಟನ್ ರೆಸಾರ್ಟ್‌ನಲ್ಲಿ ಇರಿಸಿದ್ದಾರೆ. ಅಲ್ಲಿ 12 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಕೋರ್ಟ್ ತೀರ್ಪು ಬಂದು, ಬಿಗ್‌ಬಾಸ್ ಚಿತ್ರೀಕರಣ ಆರಂಭವಾಗುವವರೆಗೆ ಅವರನ್ನು ರೆಸಾರ್ಟ್‌ನಲ್ಲೇ ಇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರಾಂತ್ಯದಲ್ಲಿ ಕಿಚ್ಚನ ಪಂಚಾಯ್ತಿ ಕಾರ್ಯಕ್ರಮದಲ್ಲಿ ಮತ್ತೆ ಬಿಗ್‌ಬಾಸ್ ಮನೆಯೊಳಗೆ ಪ್ರವೇಶ ಪಡೆದಿದ್ದ ಸ್ಪರ್ಧಿ ರಕ್ಷಿತಾ ಶೆಟ್ಟಿ ಅವರನ್ನು ನಟ ಸುದೀಪ್ ಅವರು ‘ಯಾರನ್ನು ಎಲಿಮಿನೇಟ್ ಮಾಡುತ್ತೀರಿ?’ ಎಂದು ಪ್ರಶ್ನಿಸಿದ್ದರು. ಆಗ ರಕ್ಷಿತಾ ಶೆಟ್ಟಿ ಅವರು “ನಾನು ಎಲ್ಲರನ್ನೂ ಎಲಿಮಿನೇಟ್ ಮಾಡುತ್ತೇನೆ” ಎಂದು ಉತ್ತರ ನೀಡಿದ್ದರು. ಈ ಘಟನೆ ನಡೆದ ಕೇವಲ ಮೂರು ದಿನಗಳಲ್ಲೇ ಸ್ಟುಡಿಯೋ ಸೀಜ್ ಆಗಿ, ಎಲ್ಲಾ ಸ್ಪರ್ಧಿಗಳನ್ನು ತಾತ್ಕಾಲಿಕವಾಗಿ ಹೊರಗೆ ಸ್ಥಳಾಂತರಿಸಲಾಗಿದೆ.




































