
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ: ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಡೆಸಿದ ಜಂಟಿ ದಾಳಿಯ ಬೆನ್ನಲ್ಲೇ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಈ ದಾಳಿಯಲ್ಲಿ ಹತರಾಗಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಆಕ್ರೋಶಗೊಂಡ ಇರಾನ್ ಪಡೆಗಳು ಜಾಗತಿಕವಾಗಿ ಅತ್ಯಂತ ಪ್ರಮುಖವೆನಿಸಿದ ಹೊರ್ಮುಜ್ ಜಲಸಂಧಿಯಲ್ಲಿ ಚಲಿಸುತ್ತಿದ್ದ ಬೃಹತ್ ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ ನಡೆಸಿವೆ.
ಹಡಗಿನಲ್ಲಿದ್ದ 15 ಭಾರತೀಯರ ಸ್ಥಿತಿ: ಒಮಾನ್ ಸಮೀಪದ ಸಮುದ್ರ ಮಾರ್ಗದಲ್ಲಿ ಸಾಗುತ್ತಿದ್ದ ಈ ಹಡಗಿನಲ್ಲಿ ಒಟ್ಟು 20 ಸಿಬ್ಬಂದಿಗಳಿದ್ದರು. ಇವರಲ್ಲಿ 15 ಮಂದಿ ಭಾರತೀಯ ಮೂಲದವರಾಗಿದ್ದು, ದಾಳಿಯ ತೀವ್ರತೆಗೆ ಹಡಗು ಸಮುದ್ರದ ಮಧ್ಯೆಯೇ ಹೊತ್ತಿ ಉರಿದಿದೆ. ಕ್ಷಿಪಣಿ ತಗುಲಿದ ರಭಸಕ್ಕೆ ಹಡಗಿನಲ್ಲಿದ್ದ 4 ಸಿಬ್ಬಂದಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಭಾರತೀಯರು ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ಸಾವಿರಾರು ಕೋಟಿ ಮೌಲ್ಯದ ತೈಲ ಭಸ್ಮ: ದಾಳಿಗೊಳಗಾದ ಟ್ಯಾಂಕರ್‌ನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಕಚ್ಚಾ ತೈಲವಿತ್ತು ಎನ್ನಲಾಗಿದೆ. ಮಿಸೈಲ್ ದಾಳಿಯಿಂದಾಗಿ ಹಡಗು ಬೆಂಕಿಯ ಉಂಡೆಯಂತಾಗಿದ್ದು, ಅಪಾರ ಪ್ರಮಾಣದ ತೈಲ ಸಮುದ್ರ ಪಾಲಾಗಿದೆ. ಘಟನೆ ತಿಳಿಯುತ್ತಿದ್ದಂತೆಯೇ ಒಮಾನ್ ಕಡಲ ಭದ್ರತಾ ಪಡೆ (Oman Maritime Security) ಸ್ಥಳಕ್ಕೆ ಧಾವಿಸಿ ಹಡಗಿನಲ್ಲಿದ್ದವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಜಾಗತಿಕ ತೈಲ ಪೂರೈಕೆಗೆ ಹೊಡೆತ: ಹೊರ್ಮುಜ್ ಜಲಸಂಧಿಯು ವಿಶ್ವದ ಪ್ರಮುಖ ವ್ಯಾಪಾರ ಮಾರ್ಗಗಳಲ್ಲಿ ಒಂದಾಗಿದೆ. ಈ ಘಟನೆಯಿಂದಾಗಿ ಭಾರತ ಸೇರಿದಂತೆ ಹಲವು ಏಷ್ಯಾ ರಾಷ್ಟ್ರಗಳಿಗೆ ಪೂರೈಕೆಯಾಗುವ ಇಂಧನ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಾಗುವ ಸಾಧ್ಯತೆಯಿದ್ದು, ಸಮುದ್ರ ಮಾರ್ಗದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.




































