
ಹೆಬ್ರಿ: ಇಲ್ಲಿನ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ಸೇವಾ ಸಂಗಮ ಶಿಶುಮಂದಿರದಲ್ಲಿ ಇತ್ತೀಚೆಗೆ ‘ಸಾಮೂಹಿಕ ಹುಟ್ಟುಹಬ್ಬ’ ಮತ್ತು ‘ಪೋಷಕರ ಕಲಾಕಲರವ’ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್‌ನ ಕಾರ್ಯದರ್ಶಿ ಗುರುದಾಸ್ ಶೆಣೈ ಮಾತನಾಡಿ, “ಕುಟುಂಬದ ಸಾಮರಸ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಮಾತೆಯರ ಪಾತ್ರ ಬಹುಮುಖ್ಯ. ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು,” ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಿವೃತ್ತ ತೆರಿಗೆ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಪ್ರಭು ಮಾತನಾಡಿ, “ಸಾಮೂಹಿಕ ಆಚರಣೆಗಳು ನಮ್ಮಲ್ಲಿ ಒಗ್ಗಟ್ಟಿನ ಭಾವನೆಯನ್ನು ಮೂಡಿಸುತ್ತವೆ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸಂಘಟಿತವಾಗಿ ಬಾಳುವ ಸಂಸ್ಕಾರವನ್ನು ಬೆಳೆಸುತ್ತವೆ,” ಎಂದರು.

ವೇದಿಕೆಯಲ್ಲಿ ಶಿಶು ಮಂದಿರದ ಸದಸ್ಯರಾದ ಆಶಾ ನಾಯಕ್, ನಂದಿನಿ ಡಾಂಗೆ, ಅಮೃತಭಾರತಿ ವಿದ್ಯಾಲಯದ ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ ಹಾಗೂ ಸಂಸ್ಕಾರ ಶಿಕ್ಷಣ ಪ್ರಮುಖ್ ಮೀನಾಕ್ಷಿ ಉಪಸ್ಥಿತರಿದ್ದರು.
ಸ್ವಪ್ನ ಪುತ್ರಾಯ ಪ್ರಾರ್ಥಿಸಿದರು, ಶಿಕ್ಷಕಿ ಸುಚಿತ್ರಾ ಸ್ವಾಗತಿಸಿ, ಸೌಮ್ಯ ವಂದಿಸಿದರು. ಪೂರ್ಣಿಮಾ ಭಟ್ ಮತ್ತು ಕೀರ್ತಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಪೋಷಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.




































