
ಹಾಸನ: ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ನಡೆದ ಹೃದಯವಿದ್ರಾವಕ ಗಣೇಶೋತ್ಸವ ದುರಂತಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಶುಕ್ರವಾರ ರಾತ್ರಿ ಗಣಪತಿ ಮೆರವಣಿಗೆಯ ಮೇಲೆ ನುಗ್ಗಿ 10 ಜನರ ಸಾವಿಗೆ ಕಾರಣವಾದ ಕಂಟೇನರ್ ಲಾರಿಯನ್ನು ಚಾಲಕನಲ್ಲ, ಬದಲಾಗಿ ಕ್ಲೀನರ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ಈ ಘಟನೆಗೆ ಲಾರಿ ಚಾಲಕನ ನಿರ್ಲಕ್ಷ್ಯ ಹಾಗೂ ಮದ್ಯಪಾನವೇ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಘಟನೆ ನಡೆದ ಸಂದರ್ಭದಲ್ಲಿ ಲಾರಿಯ ನಿಯಂತ್ರಣ ಕಳೆದುಕೊಂಡಿದ್ದೇ ಪ್ರಾಣಹಾನಿಗೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಲಾರಿ ಚಾಲಕ ಭುವನೇಶ್ ಅತಿಯಾಗಿ ಮದ್ಯಪಾನ ಮಾಡಿದ್ದರಿಂದ ವಾಹನ ಚಲಾಯಿಸುವ ಸ್ಥಿತಿಯಲ್ಲಿ ಇರಲಿಲ್ಲ. ಆದ್ದರಿಂದ ಕ್ಲೀನರ್ ಸ್ಟೀರಿಂಗ್ ಹಿಡಿದಿದ್ದನು ಎಂಬ ಆರೋಪಗಳು ಕೇಳಿಬಂದಿವೆ. ಈ ಕುರಿತು ಪೊಲೀಸರು ಲಾರಿ ಚಾಲಕ ಭುವನೇಶ್‌ನ ರಕ್ತ ಪರೀಕ್ಷೆ ಮಾಡಿದ್ದು, ವರದಿಗಾಗಿ ಕಾಯುತ್ತಿದ್ದಾರೆ.
ಹೊಳೆನರಸೀಪುರ ತಾಲೂಕಿನ ಕಟ್ಟೆಬೆಳಗುಲಿ ಗ್ರಾಮದ ನಿವಾಸಿ ಭುವನೇಶ್‌ನ ನಿರ್ಲಕ್ಷ್ಯವೇ ಈ ಭೀಕರ ಅಪಘಾತಕ್ಕೆ ಕಾರಣ ಎಂದು ಮೃತ ಕುಟುಂಬಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ರಸ್ತೆ ವಿಭಜಕವನ್ನು ದಾಟಿ ಮೆರವಣಿಗೆಯ ಮೇಲೆ ಲಾರಿ ಹರಿದು ಬಂದ ರೀತಿ ನೋಡಿದರೆ, ಕ್ಲೀನರ್ ಹೊಸಬನಾಗಿದ್ದು, ವೇಗ ನಿಯಂತ್ರಿಸುವ ಬದಲು ಬ್ರೇಕ್ ಬದಲಿಗೆ ಆಕ್ಸಲೇಟರ್ ಒತ್ತಿದ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪೊಲೀಸರು ಲಾರಿಯಲ್ಲಿದ್ದ ಕ್ಲೀನರ್ ಯಾರು ಎಂದು ಪತ್ತೆಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಘಟನೆಯ ಬಗ್ಗೆ ಸಂಪೂರ್ಣ ತನಿಖೆಗೆ ಆದೇಶಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಅಲ್ಲದೆ, ಮೃತರ ಕುಟುಂಬಕ್ಕೆ ಈಗಾಗಲೇ ಘೋಷಿಸಿರುವ ₹5 ಲಕ್ಷ ಪರಿಹಾರದ ಜೊತೆಗೆ ಹೆಚ್ಚುವರಿ ಪರಿಹಾರ ನೀಡುವ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ. ಪೊಲೀಸರು ಮಾರ್ಗದುದ್ದಕ್ಕೂ ಇರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಘಟನೆಯ ಸಮಗ್ರ ಚಿತ್ರಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯಲ್ಲಿ ತೀವ್ರ ದುಃಖ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.




































