
ಕಾರ್ಕಳ: “ನಗರಾಡಳಿತ ವ್ಯವಸ್ಥೆಯಲ್ಲಿ ಪೌರಕಾರ್ಮಿಕರ ಸೇವೆಯನ್ನು ಕಡೆಗಣಿಸುವ ಹಾಗೇ ಇಲ್ಲ. ಆದರೆ ಅವರ ಸೇವೆಗೆ ಸಿಗಬೇಕಾದ ಮಾನ್ಯತೆಯು ಹೆಚ್ಚಿನ ಕಡೆಗಳಲ್ಲಿ ದೊರೆಯುವುದಿಲ್ಲ. ಅವರನ್ನು ಸನ್ಮಾನಿಸುವುದು ಅತ್ಯಂತ ಪವಿತ್ರವಾದ ಕಾರ್ಯ,” ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯರೂ, ಮಂಗಳೂರಿನ ಸಹ್ಯಾದ್ರಿ ಕಾಲೇಜಿನ ಸ್ಥಾಪಕರೂ ಆದ ಡಾ. ಮಂಜುನಾಥ್ ಭಂಡಾರಿ ಅವರು ಅಭಿಪ್ರಾಯಪಟ್ಟರು.
ಕಾರ್ಕಳದ ಪುರಸಭೆಯ ಸದಸ್ಯರಾದ ಶುಭದ್ ರಾವ್ ಅವರು ತಮ್ಮ ಪುರಸಭೆಯ ಸದಸ್ಯತ್ವದ ಮೂರು ಅವಧಿಯನ್ನು (ಸತತ 18 ವರ್ಷ) ಪೂರ್ತಿ ಮಾಡುವ ಸಂದರ್ಭದಲ್ಲಿ ಏರ್ಪಡಿಸಿದ ಸಾರ್ವಜನಿಕರಿಗೆ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಕಾರ್ಕಳ ಪುರಸಭೆಯ ಎಲ್ಲ 48 ಪೌರ ಕಾರ್ಮಿಕರು, ಪೌರ ನೌಕರರು, ಹಾಗೂ ಪುರಸಭೆಯ ಮಾಜಿ ಅಧ್ಯಕ್ಷರು, ಸದಸ್ಯರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿದ್ದು ಅತ್ಯಂತ ಸ್ಮರಣೀಯವಾದ ಕಾರ್ಯ ಎಂದು ಅವರು ಬಣ್ಣಿಸಿದರು.
ಅವರು ಮುಂದುವರೆದು, “ರಾಜಕೀಯ ನೇತಾರರಿಗೆ ನಿವೃತ್ತಿ ಎಂಬುದಿಲ್ಲ. ಸಹಾಯ ಕೇಳಿಬಂದ ಎಲ್ಲ ಪಕ್ಷದವರ ಕೆಲಸವನ್ನು ಮಾಡಿಕೊಡುವ ರಾಜಕೀಯ ನಾಯಕರು ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ,” ಎಂದರು. ಈ ವೇಳೆ 18 ವರ್ಷಗಳ ಅವಧಿಯಲ್ಲಿ ಕಾರ್ಕಳ ಪುರಸಭೆಯ ಅಧ್ಯಕ್ಷರಾಗಿ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಸೇವೆ ಸಲ್ಲಿಸಿದ ಎಲ್ಲರನ್ನೂ ಶುಭದ್ ರಾವ್ ಪರವಾಗಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಮೂರು ಅವಧಿಯ ಎಲ್ಲ ಪುರಸಭೆಯ ಸದಸ್ಯರನ್ನು, ಎಲ್ಲ ಖಾಯಂ ಮತ್ತು ತಾತ್ಕಾಲಿಕ ನೌಕರರನ್ನು ಸನ್ಮಾನಿಸಲಾಯಿತು.


ಶಗುನ್ ವರ್ಮಾ ಹೆಗ್ಡೆ ಅವರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯಾಗಿ ಭಾರತದ ಅಂಡರ್ 15 ವಾಲಿಬಾಲ್ ತಂಡದ ಕ್ಯಾಪ್ಟನ್ ಆಗಿ ಚೀನಾದಲ್ಲಿ ನಡೆದ ವಿಶ್ವ ಚಾಂಪಿಯನ್ಷಿಪ್ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡಿದ ಶಗುನ್ ವರ್ಮಾ ಎಸ್ ಹೆಗ್ಡೆ ಅವರನ್ನು ಮಂಜುನಾಥ್ ಭಂಡಾರಿಯವರು ಸನ್ಮಾನಿಸಿ ಅಭಿನಂದಿಸಿದರು.
ಕಾರ್ಕಳದ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, “ರಾಜಕೀಯ ವ್ಯಕ್ತಿಗಳಿಗೆ ನಿವೃತ್ತಿ ಎಂಬುದು ಇಲ್ಲ. ಶುಭದ್ ರಾವ್ ಅವರು ಅತ್ಯುತ್ತಮ ಸೇವೆಯನ್ನು ಸಲ್ಲಿಸಿದ್ದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಪಕ್ಷವನ್ನು ಬೆಳೆಸುತ್ತಿದ್ದಾರೆ,” ಎಂದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, “ಶುಭದ್ ಅವರು 18 ವರ್ಷ ಪುರಸಭೆಯ ಸದಸ್ಯರಾಗಿ ಪಕ್ಷಾತೀತವಾಗಿ ಮಾಡಿದ ಸೇವೆಯು ಒಂದು ಅತ್ಯುತ್ತಮ ಮಾದರಿ,” ಎಂದರು.


ಅತಿಥಿಗಳಾಗಿ ಭಾಗವಹಿಸಿದ್ದ ಕಾರ್ಕಳದ ಭುವನೇಂದ್ರ ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಕೋಟ್ಯಾನ್, ಕೊಲ್ಲೂರು ದೇವಸ್ಥಾನದ ಟ್ರಸ್ಟೀ ಸುರೇಂದ್ರ ಶೆಟ್ಟಿ ಮತ್ತು ಕಾರ್ಕಳ ಜ್ಞಾನಸುಧಾ ಕಾಲೇಜಿನ ಸ್ಥಾಪಕ ಡಾ. ಸುಧಾಕರ್ ಶೆಟ್ಟಿ ಅವರು ಶುಭದ್ ಅವರನ್ನು ಅಭಿನಂದಿಸಿದರು. ಪುರಸಭೆಯ ಸದಸ್ಯರ ಪರವಾಗಿ ಅಷ್ಪಾಕ್ ಅಹಮದ್ ಅವರು ಶುಭಾಶಂಸನೆ ಮಾಡಿದರು.
ಕಾರ್ಕಳದ ನಾಗರಿಕರಿಗೆ ಅಭಿನಂದನೆ ಸಲ್ಲಿಸಿದ ಶುಭದ್ ರಾವ್
ಶುಭದ್ ರಾವ್ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, “ಇದು ನನ್ನ ಅಭಿನಂದನಾ ಕಾರ್ಯಕ್ರಮವಲ್ಲ ಅಥವಾ ಅಹಂಕಾರದ ಪ್ರದರ್ಶನವೂ ಅಲ್ಲ. ನನಗೆ ಮೂರು ಪೂರ್ಣ ಅವಧಿಗೆ ಪುರಸಭೆಯ ಸದಸ್ಯನಾಗಿ ದುಡಿಯಲು ಆಶೀರ್ವಾದ ಮಾಡಿದ ಎಲ್ಲ ನಾಗರಿಕರಿಗೆ ಪಕ್ಷಾತೀತವಾಗಿ ಕೃತಜ್ಞತೆ ಅರ್ಪಿಸಲು ಈ ಕಾರ್ಯಕ್ರಮ ಏರ್ಪಡಿಸಲಾಗಿದೆ,” ಎಂದರು.
ವೇದಿಕೆಯಲ್ಲಿ ಎಸ್.ವಿ.ಟಿ ಕಾಲೇಜಿನ ನಿವೃತ್ತ ಪ್ರಾಚಾರ್ಯೆ ಮಿತ್ರಪ್ರಭಾ ಹೆಗ್ಡೆ, ಉದ್ಯಮಿ ಜಾನ್ ಡಿಸಿಲ್ವ, ಕಾಳಿಕಾಂಬಾ ದೇವಸ್ಥಾನದ ಧರ್ಮದರ್ಶಿ ಶಿಲ್ಪಿ ರಾಮಚಂದ್ರ ಆಚಾರ್ಯ, ಶುಭದ್ ಅವರ ಪತ್ನಿ ದಿವ್ಯಾ ರಾವ್ ಹಾಗೂ ಸಿವಿಲ್ ಇಂಜಿನಿಯರ್ ನವೀನ್ ರಾವ್ ಉಪಸ್ಥಿತರಿದ್ದರು. ರಾಜೇಂದ್ರ ಭಟ್ ಕೆ ಅವರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮದ ನಂತರ ಶ್ರೇಷ್ಠ ಕಲಾವಿದರಿಂದ ವಿಶೇಷವಾದ ನೃತ್ಯ ಮತ್ತು ಸಂಗೀತವನ್ನು ಒಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.



































