
ಧರ್ಮಸ್ಥಳ : ಧರ್ಮಸ್ಥಳ ಗ್ರಾಮದಲ್ಲಿ ಪತ್ತೆಯಾದ ತಲೆಬುರುಡೆ ಪ್ರಕರಣ ಸೇರಿದಂತೆ ಹಲವು ವಿವಾದಾತ್ಮಕ ಆರೋಪಗಳ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (ಎಸ್.ಐ.ಟಿ.) ತನಿಖೆಯನ್ನು ತೀವ್ರಗೊಳಿಸಿದೆ. ಈ ಸಂಬಂಧ, ಪ್ರಕರಣದ ಕುರಿತು ವಿವಿಧ ಮಾಹಿತಿಗಳನ್ನು ಹಂಚಿಕೊಂಡಿರುವ ಕೆಲವು ಯೂಟ್ಯೂಬರ್‌ಗಳಿಗೆ ಎಸ್‌ಐಟಿ ಅಧಿಕಾರಿಗಳು ನೋಟಿಸ್ ಜಾರಿಗೊಳಿಸಿದ್ದಾರೆ.
ಎಂ.ಡಿ. ಸಮೀರ್, ಮುನಾಫ್ ಮತ್ತು ಅಭಿಷೇಕ್ ಸೇರಿದಂತೆ ಪ್ರಮುಖ ಯೂಟ್ಯೂಬರ್‌ಗಳಿಗೆ ನೋಟಿಸ್ ನೀಡಲಾಗಿದ್ದು, ತನಿಖಾಧಿಕಾರಿಗಳ ಮುಂದೆ ಶುಕ್ರವಾರ (ನಿನ್ನೆ) ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ನಿರ್ದೇಶನ ನೀಡಲಾಗಿತ್ತು. ತನಿಖೆಯ ಪ್ರಗತಿಗೆ ಸಂಬಂಧಿಸಿದಂತೆ ಈ ಯೂಟ್ಯೂಬರ್‌ಗಳಿಂದ ಕೆಲವು ಪ್ರಮುಖ ಮಾಹಿತಿಗಳನ್ನು ಪಡೆದಿರುವ ಸಾಧ್ಯತೆ ಇದೆ.
ತಿಮರೋಡಿ ಜಾಮೀನು ಅರ್ಜಿ ನಾಳೆ ವಿಚಾರಣೆ:
ಇದೇ ಪ್ರಕರಣಗಳ ಕುರಿತು ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಸಂಬಂಧಿಸಿದ ಮತ್ತೊಂದು ಪ್ರಕರಣದ ವಿಚಾರಣೆ ಇಂದು ನಡೆಯಲಿದೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ ಆರೋಪದಡಿ ದಾಖಲಾಗಿರುವ ಪ್ರಕರಣದಲ್ಲಿ ತಿಮರೋಡಿ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯ ಕುರಿತು ಮಂಗಳೂರಿನ ಪ್ರಧಾನ ಮತ್ತು ಸತ್ರ ನ್ಯಾಯಾಲಯವು ಅಕ್ಟೋಬರ್ 4 (ಇಂದು) ರಂದು ಅಂತಿಮ ನಿರ್ಧಾರ ಪ್ರಕಟಿಸಲಿದೆ. ತಿಮರೋಡಿಯವರಿಗೆ ಜಾಮೀನು ಸಿಗಲಿದೆಯೇ ಎಂಬುದರ ಕುರಿತು ಕುತೂಹಲ ಮೂಡಿದೆ.
ಸದ್ಯ ಎಸ್‌ಐಟಿ ಅಧಿಕಾರಿಗಳು ಇತ್ತ ಯೂಟ್ಯೂಬರ್‌ಗಳ ವಿಚಾರಣೆ ಮತ್ತು ಅತ್ತ ನ್ಯಾಯಾಲಯದ ನಿರ್ಧಾರದ ಮೇಲೆ ಕಣ್ಣಿಟ್ಟಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.




































