
ಉಡುಪಿ : ಧರ್ಮಸ್ಥಳ ಧಾರ್ಮಿಕ ಸಂಸ್ಥೆಯ ವಿರುದ್ಧ ನಡೆಯುತ್ತಿರುವ ಎಲ್ಲಾ ಷಡ್ಯಂತ್ರ ಮತ್ತು ಅಪಪ್ರಚಾರಗಳಿಗೆ ತಕ್ಷಣವೇ ಪೂರ್ಣ ವಿರಾಮ ಹಾಕಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಒತ್ತಾಯಿಸಿದ್ದಾರೆ.
ಡಿಸಿಎಂ ಡಿಕೆಶಿ ಹೇಳಿಕೆಗೆ ದನಿಗೂಡಿಸಿದ ಹೆಬ್ಬಾಳ್ಕರ್
ಉಡುಪಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ನಾವೆಲ್ಲ ಧರ್ಮಸ್ಥಳದ ಭಕ್ತರು ಮತ್ತು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ ಕೆಲಸಗಳನ್ನು ಮೆಚ್ಚಿಕೊಂಡಿದ್ದೇವೆ. ಈ ಷಡ್ಯಂತ್ರದ ಬಗ್ಗೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಗೊತ್ತಿದೆ. ಸದನದ ಒಳಗೂ ಅವರು ಇದನ್ನು ಷಡ್ಯಂತ್ರ ಎಂದು ಹೇಳಿದ್ದಾರೆ. ನಾನು ಅವರ ಹೇಳಿಕೆಗೆ ದನಿಗೂಡಿಸುತ್ತೇನೆ” ಎಂದರು.
ಷಡ್ಯಂತ್ರ ಮಾಡಿದವರಿಗೆ ಇದು “ಎಲ್ಲವೂ ಭೋಗಸ್” ಎಂದು ಗೊತ್ತಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರವನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.
ಸೌಜನ್ಯ ಪ್ರಕರಣಕ್ಕೆ ನ್ಯಾಯ, ಆದರೆ ಅನಾಮಿಕರ ಅಪಪ್ರಚಾರ ಬೇಡ
ಸೌಜನ್ಯ ಪ್ರಕರಣದ ಕುರಿತು ಮಾತನಾಡಿದ ಸಚಿವರು, “ಒಬ್ಬ ಹೆಣ್ಣುಮಗಳಾಗಿ ಸೌಜನ್ಯಳ ಪ್ರಕರಣಕ್ಕೆ ನ್ಯಾಯ ಸಿಗಬೇಕು ಎಂದು ನಾನು ಒತ್ತಾಯಿಸುತ್ತೇನೆ. ಆದರೆ ಈ ಅನಾಮಿಕ ಯಾರು? ಇವತ್ತು ಇಲ್ಲಿ ತೋರಿಸ್ತಾನೆ, ನಾಳೆ ಅಲ್ಲಿ ಇದೆ ಅಂತಾನೆ. ಇದಕ್ಕೆಲ್ಲ ಒಂದು ಪೂರ್ಣವಿರಾಮ ಬೇಕು” ಎಂದು ಹೇಳುವ ಮೂಲಕ ಇಲ್ಲಸಲ್ಲದ ಆರೋಪಗಳನ್ನು ನಿಲ್ಲಿಸಬೇಕು ಎಂದು ಸ್ಪಷ್ಟಪಡಿಸಿದರು.