
ಹುಬ್ಬಳ್ಳಿ: ಸಮಾಜಕ್ಕೆ ಹಾನಿಕರವಾದ ಊಹಾತ್ಮಕ ಪತ್ರಿಕೋದ್ಯಮವನ್ನು ನಿಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲೆಕ್ಟ್ರಾನಿಕ್ ಮಾಧ್ಯಮದ ಪತ್ರಕರ್ತರಿಗೆ ಕರೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ ಅಸೋಸಿಯೇಷನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನು ರಾಜಕಾರಣಕ್ಕೆ ಬಂದಾಗಿನಿಂದ ಯಾವುದೇ ಮಾಧ್ಯಮದ ಬಗ್ಗೆಯೂ ಹೀಗೆ ಬರೆಯಿರಿ ಎಂದು ಹೇಳಿಲ್ಲ. ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವಾಗಲೂ ಪ್ರಶ್ನಿಸಿಲ್ಲ. ನಿಮ್ಮಿಂದ ನನಗೇನೂ ಅಪೇಕ್ಷೆಯಿಲ್ಲ. ಸಾಧ್ಯವಾದರೆ ಸತ್ಯವನ್ನು ಮಾತ್ರ ತೋರಿಸಿ ಎಂದು ಅವರು ಒತ್ತಿ ಹೇಳಿದರು.
ತಮ್ಮ ಕಾರಿನ ಮೇಲೆ ಕಾಗೆ ಕುಳಿತ ವಿಷಯದ ಬಗ್ಗೆ ನಡೆದ ಮಾಧ್ಯಮ ಚರ್ಚೆಯನ್ನು ಉದಾಹರಿಸಿ, ಮಾಧ್ಯಮಗಳು ತೋರಿಸಿದ ಜ್ಯೋತಿಷ್ಯ ಊಹೆಗಳು ಸಂಪೂರ್ಣ ಸುಳ್ಳಾಗಿವೆ. ಇಂತಹ ಚರ್ಚೆಗಳನ್ನು ಜನರು ನಂಬುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿದರು. ನಮ್ಮ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುತ್ತದೆ ಮತ್ತು ಅದಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತದೆ ಎಂದು ಅವರು ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಘದವರು, ಬ್ಲಾಕ್‌ಮೇಲ್ ಮತ್ತು ಕೀಳುಮಟ್ಟದ ಪತ್ರಿಕೋದ್ಯಮ ನಡೆಸುತ್ತಿರುವ ಯೂಟ್ಯೂಬ್ ಚಾನೆಲ್‌ಗಳ ಹಾವಳಿ ಹೆಚ್ಚಿದೆ, ಇದರಿಂದ ಪತ್ರಿಕೋದ್ಯಮದ ಘನತೆ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇವುಗಳ ಹಾವಳಿ ತಡೆಯಲು ಯೂಟ್ಯೂಬ್ ಚಾನೆಲ್‌ಗಳಿಗೂ ಪರವಾನಗಿಯನ್ನು ಕಡ್ಡಾಯಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.




































