
ಶಿವಮೊಗ್ಗ: ರಸ್ತೆಯಲ್ಲಿ ಆಟವಾಡುತ್ತಿದ್ದ ಕೇವಲ ಎರಡು ವರ್ಷದ ಪುಟ್ಟ ಮಗುವಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮಗು ಮೃತಪಟ್ಟಿರುವ ದುರ್ಘಟನೆ ಶಿವಮೊಗ್ಗ ನಗರದ ಹೊರವಲಯದ ವಿರುಪಿನಕೊಪ್ಪದಲ್ಲಿ ನಡೆದಿದೆ.
ಷಣ್ಮುಖ ಎಂಬುವರ ಪುತ್ರ ವಿನಯ್ (2) ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ವಿನಯ್ ರಸ್ತೆಯಲ್ಲಿ ಆಟವಾಡುತ್ತಿದ್ದ ವೇಳೆ ಕೋಟೆಗಂಗೂರು ಕಡೆಯಿಂದ ಸಾಗರ ರಸ್ತೆಯೆಡೆಗೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ.
ಕಾರು ಡಿಕ್ಕಿಯಿಂದ ವಿನಯ್ ತಲೆ, ಕೈ ಸೇರಿದಂತೆ ದೇಹದ ವಿವಿಧೆಡೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಕೂಡಲೇ ಮಗುವನ್ನು ಸರ್ಕಾರಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.




































