
ಕಾರ್ಕಳ : ದಶಕದಿಂದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ GST ತೆರಿಗೆಯ ಹೆಸರಿನಲ್ಲಿ ದೇಶದ ಜನರನ್ನು ಲೂಟಿ ಹೊಡೆದು ಇದೀಗ ಜನರ ಆಕ್ರೋಶಕ್ಕೆ ಬೆದರಿ GST ಸರಳೀಕರಣಗೊಳಿಸಿದೆ, GST ವಿಚಾರದಲ್ಲಿ ಕೇಂದ್ರ ಸರ್ಕಾರದ ಹಠಾತ್ ನಿರ್ಧಾರವು ಆಳುವವರ ಅಭದ್ರತೆಯನ್ನು ಸೂಚಿಸುತ್ತದೆ, ಇದು ದೀಪಾವಳಿಯ ಕೊಡುಗೆಯಲ್ಲ, ಬದಲಾಗಿ ಇದು ತಪ್ಪನ್ನು ತಿದ್ದಿಕೊಂಡಿರುವುದಷ್ಟೇ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ವ್ಯಾಖ್ಯಾನಿಸಿದ್ದಾರೆ.
ಮೋದಿ ಸರ್ಕಾರದ GST ಸುಲಿಗೆಯ ವಿರುದ್ದ 2017 ಸೆಪ್ಟಂಬರ್ ತಿಂಗಳಿನಲ್ಲಿಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶದಾದ್ಯಂತ ಹೋರಾಟವನ್ನು ಮಾಡಿದ್ದರು. ಅವೈಜ್ಞಾನಿಕ GST ಲೂಟಿಯನ್ನು ಅವರು “ಗಬ್ಬರ್ ಸಿಂಗ್ ಟ್ಯಾಕ್ಸ್” ಎಂದು ಜರೆದಿದ್ದರು. ದೇಶದ ಬಡ ವ್ಯಾಪಾರಿಗಳು, ಜನ ಸಾಮಾನ್ಯರು ಮೋದಿ ಸರ್ಕಾರದ ಗಬ್ಬರ್ ಸಿಂಗ್ ಟ್ಯಾಕ್ಸ್ ನಿಂದಾಗಿ ಬವಣೆ ಪಡುವಂತಾಯಿತು. ಕಾಂಗ್ರೆಸ್ ಪಕ್ಷವು ಕಳೆದ 8 ವರ್ಷಗಳಿಂದಲೂ ದೇಶದ ಜನ ಸಾಮಾನ್ಯರ ಪರವಾಗಿ ಗಟ್ಟಿಯಾಗಿ ನಿಂತು ಗಬ್ಬರ್ ಸಿಂಗ್ ಟ್ಯಾಕ್ಸ್ ವಿರುದ್ದ ಹೋರಾಟ ನಡೆಸಿ ಕೇಂದ್ರ ಸರ್ಕಾರದ ಕಣ್ಣು ತೆರೆಸುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ.
ವಿಧಾನಸಭಾ ಚುನಾವಣಾ ಸಮೀಪದಲ್ಲಿರುವ ಬಿಹಾರ ರಾಜ್ಯದಲ್ಲಿ ತನಗೆ ತೀವ್ರ ಜನ ವಿರೋದ ಎದುರಾಗಿದ್ದನ್ನು ಮನಗಂಡಿರುವ ಬಿಜೆಪಿಗೆ GST ಸರಳೀಕರಿಸದೆ ಬೇರೆ ವಿಧಿ ಇರಲಿಲ್ಲ. ತನ್ನ ಸೋಲನ್ನು, ದುರಾಡಳಿತವನ್ನು ಒಪ್ಪಿಕೊಳ್ಳದ ಬಿಜೆಪಿ GST ಸರಳೀಕರಣವನ್ನು ಹಬ್ಬದ ಕೊಡುಗೆ ಎಂದಿರುವುದು ಹಾಸ್ಯಾಸ್ಪದ. 8 ವರ್ಷಗಳಿಂದ ದೇಶದ ಜನರು ಹಬ್ಬ ಆಚರಿಸುವಾಗ GST ತೆರಿಗೆಯಿಂದಾಗಿ ಹಬ್ಬ ಆಚರಿಸಲು ತೊಂದರೆಯಾಗುತ್ತಿದೆ ಎಂದು ಬಿಜೆಪಿ ನಾಯಕರಿಗೆ ಅರಿವಾಗಿಲ್ಲವೆ..?
ದೇಶದ ಜನರು ಕಳೆದ 8 ವರ್ಷಗಳಲ್ಲಿ ದೀಪಾವಳಿ ಹಬ್ಬವನ್ನು ಆಚರಿಸಿಲ್ಲವೆ..? ಆಗ ಜನರ ದೀಪಾವಳಿ ಹಬ್ಬದ ಸಂತಸದ ಬಗ್ಗೆ ಕಾಳಜಿ ಹೊಂದಿರದ ಬಿಜೆಪಿ ಇದೀಗ ಹಬ್ಬಕ್ಕೆ ಕೊಡುಗೆ ನೀಡುತ್ತಿದ್ದೇವೆ ಎಂದು ದೀಪಾವಳಿಗೆ ಮುಂಚಿತವಾಗಿಯೇ ಮಾತಿನ ಪಟಾಕಿ ಸಿಡಿಸುತ್ತಿದೆ. ಜನರ ಹಣವನ್ನು ಜನರಿಗೇ ವಾಪಾಸು ನೀಡುವುದು ಕೊಡುಗೆಯಲ್ಲ, ಕೊಡುಗೆಯ ಹೆಸರಿನಲ್ಲಿ ಬಿಜೆಪಿ ಸರ್ಕಾರ ತಾನು 8 ವರ್ಷಗಳಿಂದ ಮಾಡಿದ ತಪ್ಪನ್ನು ತಿದ್ದಿಕೊಂಡಿದೆ.
ಜನ ಸಾಮಾನ್ಯರ ಮೇಲೆ ಅವೈಜ್ಞಾನಿಕ ಟ್ಯಾಕ್ಸ್ ಹೇರುವಾಗಲೇ ಈ ಬಗ್ಗೆ ಕಾಳಜಿ ಇರಬೇಕಾಗಿತ್ತು. ಗಬ್ಬರ್ ಸಿಂಗ್ ಟ್ಯಾಕ್ಸ್ ಮೂಲಕ ಮನಸೋ ಇಚ್ಚೆ ಜನರನ್ನು ಸುಲಿಗೆ ಮಾಡಿ ಈಗ ಕೊಡುಗೆಯ ನಾಟಕವಾಡುವುದು ಬೆಂಕಿಯಿಟ್ಟು, ಸುಟ್ಟವರೇ ಗಾಯಕ್ಕೆ ಔಷದಿ ಹಚ್ಚಿದಂತೆ, ಜನರ ಬದುಕಿಗೆ ಬೆಂಕಿಯ ಕೊಳ್ಳಿಯಿಟ್ಟ ಬಿಜೆಪಿಗರೇ ಈಗ ಔಷಧಿ ಬಾಟಲಿ ಹಿಡಿದು ನಿಂತಿದ್ದಾರೆ. ಬಿಜೆಪಿ ಸರ್ಕಾರದ ಈ ಕ್ರೂರತ್ವವನ್ನು ದೇಶದ ಜನ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಚುನಾವಣೆಯಲ್ಲಿ ನಿಮಗೆ ಸೋಲಿನ ಕೊಡುಗೆಯನ್ನು ನೀಡಲಿದ್ದಾರೆ. ಆಳುವವರು ಜನರ ಬಗ್ಗೆ ಕಾಳಜಿ ಹೊಂದಿರಬೇಕು. ಮತ ನೀಡಿದ ಜನರನ್ನು ಸುಲಿಗೆ ಮಾಡುವ ಬಿಜೆಪಿಯ ವಿರುದ್ದ ಜನ ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದಾರೆ. ಗಬ್ಬರ್ ಸಿಂಗ್ ಟ್ಯಾಕ್ಸ್ ಕುಖ್ಯಾತಿಯ GST ವಿರುದ್ದ ಸತತ ಹೋರಾಟ ನೀಡಿ ಯಶಸ್ವಿಯಾದ ರಾಹುಲ್ ಗಾಂಧಿಯವರಿಗೆ ಇದೇ ಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಮತ್ತು GST ಮೂಲಕ ಜನರನ್ನು ಲೂಟಿಗೈದ ಬಿಜೆಪಿ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.