
ವಾಷಿಂಗ್ಟನ್ ಡಿ.ಸಿ.: ಅಮೆರಿಕದ ಪ್ರಭಾವಿ ಯುವ ನಾಯಕ ಹಾಗೂ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಪ್ತ ಸಹವರ್ತಿ ಚಾರ್ಲಿ ಕಿರ್ಕ್ (31) ಅವರನ್ನು ಭಾಷಣದ ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ದುರಂತ ಘಟನೆ ಅಮೆರಿಕದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಪ್ರೀತಿಯ ಪತಿ ಹಾಗೂ ಇಬ್ಬರು ಮಕ್ಕಳ ತಂದೆಯಾಗಿದ್ದ ಚಾರ್ಲಿ ಕಿರ್ಕ್ ಅವರ ಕುಟುಂಬದ ಪ್ರೀತಿಯ ಕ್ಷಣಗಳ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಭಾವುಕರಾಗಿ ಸಂತಾಪ ಸೂಚಿಸಿದ್ದಾರೆ.
ದುರಂತಕ್ಕೆ ಕಾರಣವಾದ ಬಂದೂಕು ಹಿಂಸಾಚಾರದ ಪ್ರಶ್ನೆ
ಚಾರ್ಲಿ ಕಿರ್ಕ್ ಅವರು ಉಟಾವಾ ವ್ಯಾಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ. ಭಾಷಣದ ಕೊನೆಯಲ್ಲಿ ಸಭಿಕರೊಬ್ಬರು, “ಕಳೆದ 10 ವರ್ಷಗಳಲ್ಲಿ ಅಮೆರಿಕದಲ್ಲಿ ಎಷ್ಟು ಸಾಮೂಹಿಕ ಶೂಟರ್‌ಗಳಿದ್ದಾರೆ?” ಎಂದು ಪ್ರಶ್ನಿಸಿದಾಗ, ಕಿರ್ಕ್ “ಗ್ಯಾಂಗ್ ಹಿಂಸಾಚಾರವನ್ನು ಲೆಕ್ಕ ಹಾಕಬೇಕೋ ಬೇಡವೋ?” ಎಂದು ಹೇಳುತ್ತಿದ್ದಾಗಲೇ ಕೆಲವೇ ಸೆಕೆಂಡುಗಳಲ್ಲಿ ಅವರ ಮೇಲೆ ಗುಂಡಿನ ದಾಳಿಯಾಗಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ರಾಜಕೀಯ ಪ್ರತಿಕ್ರಿಯೆ ಮತ್ತು ಗನ್ ನೀತಿ ಕುರಿತು ಚರ್ಚೆ
ಚಾರ್ಲಿ ಕಿರ್ಕ್ ಹತ್ಯೆಯನ್ನು ಎಲ್ಲ ಪಕ್ಷಗಳ ರಾಜಕೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಡೊನಾಲ್ಡ್ ಟ್ರಂಪ್ ಅವರು ಕಿರ್ಕ್ ಅವರನ್ನು “ದಂತಕಥೆಯ ಸಂಪ್ರದಾಯವಾದಿ ನಾಯಕ” ಎಂದು ಬಣ್ಣಿಸಿ ಸಂತಾಪ ಸೂಚಿಸಿದ್ದಾರೆ. ಕಿರ್ಕ್ ಅವರು ತಮ್ಮ ಜೀವನದುದ್ದಕ್ಕೂ ಗನ್ ಹಿಂಸಾಚಾರದ ಬಗ್ಗೆ ವಿಭಿನ್ನ ನಿಲುವುಗಳನ್ನು ಹೊಂದಿದ್ದರು. ಶಸ್ತ್ರಸಜ್ಜಿತ ಸಮಾಜದಲ್ಲಿ ಗನ್ ಹಿಂಸಾಚಾರ ಸಹಜ, ಆದರೆ ಇದನ್ನು ತಡೆಯಲು ಶಾಲೆಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನೇಮಿಸಬೇಕು ಎಂದು ಅವರು ವಾದಿಸುತ್ತಿದ್ದರು. ಇದೀಗ ಅವರ ಹತ್ಯೆಯ ಬಳಿಕ ಬಂದೂಕು ನಿಯಂತ್ರಣ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.



































