
ಬೆಂಗಳೂರು : ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆ (Bengaluru Potholes) ಕೊನೆಯಿಲ್ಲದ ಕಥೆಯಾಗಿದ್ದು, ಇತ್ತೀಚೆಗೆ ನಗರದಲ್ಲಿ ಕಂಡುಬಂದ ವಿಚಿತ್ರ ದೃಶ್ಯವೊಂದು ಸರ್ಕಾರದ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕೆ.ಆರ್. ರಸ್ತೆಯ ಬಳಿಯ ಒಂದು ಪ್ರದೇಶದಲ್ಲಿನ ಅಪಾಯಕಾರಿ ರಸ್ತೆ ಗುಂಡಿಯನ್ನು ಸ್ಥಳೀಯರು ಹಳೆಯ ಸೋಫಾದಿಂದ ಮುಚ್ಚಿರುವ ಪೋಸ್ಟ್ ರೆಡ್ಡಿಟ್‌ನಲ್ಲಿ ಭಾರೀ ವೈರಲ್ ಆಗಿದೆ.
ಪ್ರತಿದಿನ ರಸ್ತೆ ಸಮಸ್ಯೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಕೊನೆಗೆ ಉಳಿದಿರುವುದು ಜನರೇ ಗುಂಡಿ ಮುಚ್ಚುವ ಕಾರ್ಯ. ಅದರ ಭಾಗವಾಗಿ, ಈ ರಸ್ತೆ ಗುಂಡಿಗೆ ಶಾಶ್ವತ ಪರಿಹಾರ ಸಿಗದ ಕಾರಣ, ಸ್ಥಳೀಯ ಅಂಗಡಿಯವರು ತಾತ್ಕಾಲಿಕವಾಗಿ ಹಳೆ ಸೋಫಾವನ್ನೇ ತಂದು ಗುಂಡಿಯ ಮೇಲೆ ಇರಿಸಿ ಮುಚ್ಚಿದ್ದಾರೆ ಎಂದು ತಿಳಿದುಬಂದಿದೆ.
ಸಾರ್ವಜನಿಕರ ತೀವ್ರ ಅಸಮಾಧಾನ
ರೆಡ್ಡಿಟ್‌ನಲ್ಲಿ ಹಂಚಿಕೊಂಡಿರುವ ಈ ಪೋಸ್ಟ್ ಹೊಸ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ರಸ್ತೆ ಗುಂಡಿಯನ್ನು ನೋಡಿರುವ ಬಳಕೆದಾರರು, “ಅಬ್ಬಾಬ್ಬ ಈ ಗುಂಡಿ ಎಷ್ಟು ಆಳವಾಗಿದೆ. ಒಂದು ದ್ವಿಚಕ್ರ ವಾಹನವು ಬೀಳುವಷ್ಟು ಅಗಲವಿದೆ,” ಎಂದು ಕಮೆಂಟ್ ಮಾಡಿದ್ದಾರೆ.
ಪೊಲೀಸರು ಈ ಹಿಂದೆ ಗುಂಡಿಯಿದೆ ಎಂದು ಎಚ್ಚರಿಸಲು ಬ್ಯಾರಿಕೇಡ್ ಹಾಕಿದ್ದರೂ, ಗುಂಡಿ ಮುಚ್ಚುವ ಮನಸ್ಸು ಯಾರೂ ಮಾಡಿಲ್ಲ. “ನೀವು ಬಿಬಿಎಂಪಿ ಅಥವಾ ಗ್ರೇಟರ್ ಬೆಂಗಳೂರಿಗೂ ಈ ಬಗ್ಗೆ ದೂರು ನೀಡಿದ್ರೂ ಯಾವುದೇ ಪರಿಹಾರ ಸಿಗುವುದಿಲ್ಲ,” ಎಂದು ಒಬ್ಬ ಬಳಕೆದಾರರು ಕಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಬಳಕೆದಾರರು, “ಮುಂದಿನ ಹತ್ತು ವರ್ಷಗಳ ಕಾಲ ಈ ಬದಲಾವಣೆಗಳು ಆಗುವುದಿಲ್ಲ. ಒಂದಾ ಸರ್ಕಾರ ಈ ಬಗ್ಗೆ ಬದಲಾವಣೆ ತರಬೇಕು. ಇಲ್ಲ ಜನರೇ ಬದಲಾವಣೆಯನ್ನು ಮಾಡಬೇಕು,” ಎಂದು ಹೇಳಿದ್ದಾರೆ. ಇದರ ನಡುವೆ, “ಯಾರಾದರೂ ಸೋಫಾವನ್ನು ತಿರುಗಿಸಿ ಟ್ರಾಫಿಕ್ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಬಹುದು,” ಎಂದು ಕೆಲವರು ತಮಾಷೆಯಾಗಿ ಕಮೆಂಟ್ ಮಾಡಿ, ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಲೇವಡಿ ಮಾಡಿದ್ದಾರೆ.




































