
ರಸ್ತೆಗಳು ಮತ್ತು ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಅನುಮತಿ ಇಲ್ಲದೆ ನಡೆಯುವ ನಮಾಜು (ಪ್ರಾರ್ಥನೆ)ಗೆ ನಿರ್ಬಂಧ ಹೇರಬೇಕು ಎಂದು ಆಗ್ರಹಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಸಾರ್ವಜನಿಕ ಸ್ಥಳಗಳು ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಪರವಾನಗಿ ಪಡೆಯದೆ ಯಾವುದೇ ಸಂಘ-ಸಂಸ್ಥೆಗಳು ಚಟುವಟಿಕೆಗಳನ್ನು ನಡೆಸುವುದನ್ನು ಅಕ್ರಮ ಪ್ರವೇಶ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಯತ್ನಾಳ್ ಅವರ ಈ ಆಗ್ರಹ ಬಂದಿದೆ.
ಸಂಚಾರ ಮತ್ತು ಸಾರ್ವಜನಿಕರಿಗೆ ಧಕ್ಕೆ: ಮೂಲಭೂತ ಹಕ್ಕುಗಳ ಉಲ್ಲಂಘನೆ
ರಸ್ತೆ ಮತ್ತು ಇತರ ಸಾರ್ವಜನಿಕ ಪ್ರದೇಶಗಳಲ್ಲಿ ಸರ್ಕಾರದ ಪೂರ್ವಾನುಮತಿ ಇಲ್ಲದೆ ನಮಾಜು ಮಾಡುವುದರಿಂದ ಸಂಚಾರಕ್ಕೆ ಮತ್ತು ಸಾಮಾನ್ಯ ಸಾರ್ವಜನಿಕ ವ್ಯವಹಾರಗಳಿಗೆ ತೀವ್ರ ತೊಂದರೆಯಾಗುವುದನ್ನು ನಾವು ಗಮನಿಸಿದ್ದೇವೆ ಎಂದು ಯತ್ನಾಳ್ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. ಈ ರೀತಿ ಸಾಮೂಹಿಕ ಪ್ರಾರ್ಥನೆಗಳು ಸಂಚಾರ ದಟ್ಟಣೆಯನ್ನು ಸೃಷ್ಟಿಸುವುದರಿಂದ ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಪ್ರಯಾಣಿಕರ ಸುಲಭ ಸಂಚಾರದ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ. ಅಲ್ಲದೆ, ಸರ್ಕಾರಿ ಕಚೇರಿಗಳ ಆವರಣ ಮತ್ತು ಅನುದಾನಿತ ಸಂಸ್ಥೆಗಳೊಳಗೆ ನಮಾಜ್ ನಡೆಸಲು ಕಾನೂನಿನ ಪ್ರಕಾರ ಅವಕಾಶವಿಲ್ಲ. ಈ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ತಕ್ಷಣವೇ ನಿಯಂತ್ರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ತಾರತಮ್ಯ ನೀತಿ ಆರೋಪ, ವಿಶೇಷ ಮಾರ್ಗಸೂಚಿ (SOP) ಜಾರಿಗೆ ಒತ್ತಾಯ
ಈ ರೀತಿಯ ಚಟುವಟಿಕೆಗಳಿಗೆ ಅವಕಾಶ ನೀಡಿ, ಉಳಿದವುಗಳಿಗೆ ನಿರ್ಬಂಧ ಹೇರುವುದು ಸರ್ಕಾರದ ತಾರತಮ್ಯದ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಯತ್ನಾಳ್ ಆರೋಪಿಸಿದ್ದಾರೆ. ಆದ್ದರಿಂದ, ಸರ್ಕಾರವು ತಕ್ಷಣವೇ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರಿಗೆ ರಸ್ತೆಗಳು, ಫುಟ್‌ಪಾತ್‌ಗಳಲ್ಲಿ ಕಾನೂನು ಬಾಹಿರವಾಗಿ ನಡೆಯುವ ನಮಾಜನ್ನು ನಿರ್ಬಂಧಿಸಲು ಸೂಚನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇಂತಹ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರವು ನಿರ್ದಿಷ್ಟ ಮಾರ್ಗದರ್ಶಿ ಸೂತ್ರ (Standard Operating Procedure – SOP) ವನ್ನು ಜಾರಿಗೊಳಿಸಬೇಕು. ಕರ್ನಾಟಕ ಪೊಲೀಸ್ ಕಾಯ್ದೆಯ ಅಡಿಯಲ್ಲಿ ಸಶಸ್ತ್ರ ಪಡೆಗಳ ಮೂಲಕ ಇಂತಹ ಚಟುವಟಿಕೆಗಳನ್ನು ನಿಯಂತ್ರಿಸುವುದರಿಂದ ಸರ್ಕಾರದ ಜಾತ್ಯತೀತ ನಿಲುವು, ಸಮಾನತೆ, ಕಾನೂನು ಸುವ್ಯವಸ್ಥೆ ಮತ್ತು ಧಾರ್ಮಿಕ ಸಮನ್ವಯತೆಯನ್ನು ಎತ್ತಿ ಹಿಡಿದಂತಾಗುತ್ತದೆ. ಹಾಗಾಗಿ, ಅನುಮತಿ ಇಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ನಮಾಜ್ ಅನ್ನು ತಕ್ಷಣವೇ ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಯತ್ನಾಳ್ ಅವರು ಮನವಿ ಮಾಡಿದ್ದಾರೆ.
ಪ್ರಿಯಾಂಕ ಖರ್ಗೆ ಪತ್ರಕ್ಕೆ ಯತ್ನಾಳ್ ಪ್ರತಿಕ್ರಿಯೆ: ಸರ್ಕಾರದ ನಡೆ ಕುತೂಹಲ
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಅವರು ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ, ಗುರುವಾರದ ಸಚಿವ ಸಂಪುಟ ಸಭೆಯು ಪರೋಕ್ಷವಾಗಿ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿರ್ಧಾರ ತೆಗೆದುಕೊಂಡಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ, ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇದೀಗ ಪ್ರತಿಯಾಗಿ, ಅನುಮತಿ ಇಲ್ಲದೆ ರಸ್ತೆ, ಸರ್ಕಾರಿ ಜಾಗಗಳಲ್ಲಿ ನಮಾಜ್ ಮಾಡುವುದನ್ನು ನಿರ್ಬಂಧಿಸುವಂತೆ ಕೋರಿ ಸಿಎಂಗೆ ಪತ್ರ ಬರೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಈ ಕುರಿತು ರಾಜ್ಯ ಸರ್ಕಾರ ಯಾವ ನಿಲುವು ತಳೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.




































