
ಬೆಂಗಳೂರು: ವೈದ್ಯಕೀಯ ಕ್ಷೇತ್ರದಲ್ಲಿ ತಲ್ಲಣ ಮೂಡಿಸಿರುವ ಮಕ್ಕಳ ತಜ್ಞೆ ಡಾ. ಕೃತಿಕಾ ರೆಡ್ಡಿ ಅವರ ಕೊಲೆ ಪ್ರಕರಣದಲ್ಲಿ ಮಹತ್ವದ ಮಾಹಿತಿ ಬೆಳಕಿಗೆ ಬಂದಿದೆ. ಪತ್ನಿಯನ್ನೇ ಕೊಲೆ ಮಾಡಿದ ಆರೋಪಿ, ಪತಿ ಮಹೇಂದ್ರ ರೆಡ್ಡಿ, ವೈದ್ಯನ ಸೋಗು ಹಾಕಿ ನಗರದ ಫಾರ್ಮಸಿಗಳಿಂದ ಅರಿವಳಿಕೆ (Anesthesia) ಔಷಧಿಗಳನ್ನು ಖರೀದಿಸಿದ್ದ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.
ಶಸ್ತ್ರಚಿಕಿತ್ಸಕನೆಂದು ಸುಳ್ಳು ಹೇಳಿ ‘ಪ್ರೊಪೋಫೋಲ್’ ಖರೀದಿ
ತನಿಖಾಧಿಕಾರಿಗಳ ಪ್ರಕಾರ, ಆರೋಪಿ ಮಹೇಂದ್ರ ರೆಡ್ಡಿ ತಾನೇ ನೇರವಾಗಿ ವೈದ್ಯಕೀಯ ಮಳಿಗೆಗಳಿಗೆ ಹೋಗಿ ಪ್ರೊಪೋಫೋಲ್ (Propofol) ಎಂಬ ಅರಿವಳಿಕೆ ಔಷಧಿಯನ್ನು ಕೇಳಿದ್ದ. ಆದರೆ, ಇದು ಸುಲಭವಾಗಿ ಮಾರಾಟ ಮಾಡಲು ಸಾಧ್ಯವಿಲ್ಲದ ಔಷಧಿಯಾಗಿದ್ದರಿಂದ ಆರಂಭದಲ್ಲಿ ಮೆಡಿಕಲ್ ಮಾಲೀಕರು ನೀಡಲು ನಿರಾಕರಿಸಿದ್ದರು. ಆಗ ಆರೋಪಿ, ತಾನು ಸರ್ಜನ್ ಮತ್ತು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ಎಂದು ಸುಳ್ಳು ಹೇಳಿ, ನಕಲಿ ಗುರುತಿನ ಚೀಟಿ ಮತ್ತು ತಾನೇ ಬರೆದ ಪ್ರಿಸ್ಕ್ರಿಪ್ಷನ್ (ಚೀಟಿ) ಅನ್ನು ತೋರಿಸಿದ್ದ. ಇದರಿಂದ ಅನುಮಾನ ದೂರವಾದ ಮೆಡಿಕಲ್ ಮಾಲೀಕರು ಔಷಧಿಯನ್ನು ನೀಡಿದ್ದಾರೆ. ಪೊಲೀಸರು ಈಗ ಸಂಬಂಧಪಟ್ಟ ಮೆಡಿಕಲ್ ಮಾಲೀಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
ಅರಿವಳಿಕೆ ಓವರ್‌ಡೋಸ್‌ನಿಂದ ಪತ್ನಿಯ ಸಾವು
ಪೊಲೀಸ್ ತನಿಖೆಯಿಂದ ತಿಳಿದುಬಂದಿರುವ ವಿವರಗಳ ಪ್ರಕಾರ, ತೀವ್ರ ನೋವಿನಿಂದ ಬಳಲುತ್ತಿದ್ದ ಡಾ. ಕೃತಿಕಾ ರೆಡ್ಡಿಯವರು ಮನೆಯಲ್ಲಿ ಮಲಗಿದ್ದಾಗ, ಆರೋಪಿ ಮಹೇಂದ್ರ ರೆಡ್ಡಿ ರಾತ್ರಿ ವೇಳೆ ಅವರಿಗೆ ಇಂಟ್ರಾವೆನಸ್ (IV) ಮಾರ್ಗದ ಮೂಲಕ ಈ ಅರಿವಳಿಕೆ ಔಷಧಿಯನ್ನು ನೀಡಿದ್ದಾನೆ. ಇದು ಅತಿಯಾದ ಓವರ್‌ಡೋಸ್‌ಗೆ (Overdose) ಕಾರಣವಾಗಿ, ಮರುದಿನ ಬೆಳಗ್ಗೆ ಏಳುವಷ್ಟರಲ್ಲಿ ಡಾ. ಕೃತಿಕಾ ಅವರು ಜೀವಂತವಾಗಿರಲಿಲ್ಲ. ಕೊಲೆಯಾದ ರಾತ್ರಿ ಆರೋಪಿ ಮಹೇಂದ್ರ ರೆಡ್ಡಿ ಕೂಡ ಪತ್ನಿ ಇದ್ದ ಕೋಣೆಯಲ್ಲಿಯೇ ಮಲಗಿದ್ದ.
ಮನೆಯ ಕೋಣೆಯೇ ಕ್ಲಿನಿಕ್ ಆಗಿತ್ತು: ನಾಟ್ ಫಾರ್ ಸೇಲ್ ಔಷಧ ಪತ್ತೆ
ಮಹೇಂದ್ರ ರೆಡ್ಡಿ ಪತ್ನಿಯ ಕೊಠಡಿಯನ್ನು ಬಹುತೇಕ ಕ್ಲಿನಿಕ್ ರೂಪಕ್ಕೆ ಬದಲಾಯಿಸಿದ್ದ ಎಂಬ ಆಘಾತಕಾರಿ ಸಂಗತಿ ತನಿಖೆಯ ವೇಳೆ ಬಯಲಾಗಿದೆ. ಮನೆಯಲ್ಲಿ ಮಾರಾಟಕ್ಕಿಲ್ಲದ (‘Not for Sale’) ಔಷಧಗಳು ಸೇರಿದಂತೆ ಭಾರೀ ಪ್ರಮಾಣದ ವೈದ್ಯಕೀಯ ಸಾಮಗ್ರಿಗಳು ಪತ್ತೆಯಾಗಿವೆ. ಗ್ಯಾಸ್ಟ್ರಿಕ್‌ಗೆ ಸಂಬಂಧಿಸಿದ ಔಷಧಗಳು, ಗ್ಲೂಕೋಸ್ ಬಾಟಲ್‌ಗಳು (Glucose Bottles) ಸೇರಿದಂತೆ ರಾಶಿ ರಾಶಿ ಔಷಧಿಗಳು ಕೃತಿಕಾ ರೆಡ್ಡಿ ಅವರ ಕೋಣೆಯಲ್ಲಿ ಸಿಕ್ಕಿವೆ. ಆರೋಪಿಯು ಪತ್ನಿಯ ಮೇಲೆ ನಿರಂತರವಾಗಿ ವೈದ್ಯಕೀಯ ಪ್ರಯೋಗಗಳನ್ನು ನಡೆಸುತ್ತಿದ್ದನೆಂಬ ಅನುಮಾನ ವ್ಯಕ್ತವಾಗಿದೆ. ಕೃತಿಕಾ ಅವರ ಋತುಚಕ್ರದ (Menstrual Cycle) ಸಮಯದಲ್ಲಿಯೂ ಸಹ ಡ್ರಿಪ್ (Drip) ಹಾಕಿಸಿಕೊಳ್ಳುವಂತೆ ಆಕೆ ಮೇಲೆ ಒತ್ತಾಯ ಹೇರುತ್ತಿದ್ದ. ಈ ಕಾರಣದಿಂದ ಅವರ ಕೈಗಳ ಮೇಲೆ ಪದೇ ಪದೇ ಕ್ಯಾನುವಲ್ (Cannula) ಚುಚ್ಚಿದ್ದರಿಂದಾದ ಗಾಯದ ಗುರುತುಗಳು ಕಂಡುಬಂದಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹೇಂದ್ರ ರೆಡ್ಡಿ ಅವರ ವಿಚಿತ್ರ ನಡವಳಿಕೆ ಮತ್ತು ವೈದ್ಯಕೀಯ ಉಪಕರಣಗಳ ದುರುಪಯೋಗವು ಈ ಭೀಕರ ಕೃತ್ಯಕ್ಕೆ ಕಾರಣವಾಗಿರುವ ಸಾಧ್ಯತೆ ಇದೆ.




































