
ಧರ್ಮಸ್ಥಳ: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ (SIT) ಅಧಿಕಾರಿಗಳು ಧರ್ಮಸ್ಥಳದ ಬಂಗ್ಲೆಗುಡ್ಡ ಪ್ರದೇಶದಲ್ಲಿ ನಡೆಸುತ್ತಿರುವ ಶೋಧ ಕಾರ್ಯದಲ್ಲಿ ಮಹತ್ವದ ಮಾಹಿತಿ ದೊರೆತಿದೆ. ಇಲ್ಲಿ ಪತ್ತೆಯಾದ ಬುರುಡೆ ಮತ್ತು ಅಸ್ಥಿಪಂಜರದ ಬಳಿ ಸಿಕ್ಕ ಗುರುತಿನ ಚೀಟಿ (ID Card) ಮೂಲಕ ವ್ಯಕ್ತಿಯ ಗುರುತು ಪತ್ತೆ ಹಚ್ಚಲಾಗಿದೆ.
ಈ ಐಡಿ ಕಾರ್ಡ್ ಯು.ಬಿ. ಅಯ್ಯಪ್ಪ (70) ಎಂಬುವವರಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಅವರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು, 2017ರಲ್ಲಿ ಮೈಸೂರಿನ ಆಸ್ಪತ್ರೆಗೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದರು.
ಹೀಗಾಗಿ, ಬಂಗ್ಲೆಗುಡ್ಡದಲ್ಲಿ ಪತ್ತೆಯಾದ ಅಸ್ಥಿಪಂಜರಗಳು ಅಯ್ಯಪ್ಪ ಅವರದ್ದೇ ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮೇಲ್ನೋಟಕ್ಕೆ, ಪತ್ತೆಯಾದ ಅವಶೇಷಗಳು ಆತ್ಮಹತ್ಯೆಯ ಸ್ಥಿತಿಯಲ್ಲಿ ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ. ತಲೆಬುರುಡೆ ಮತ್ತು ಅಸ್ಥಿಪಂಜರಗಳು ಹಗ್ಗ ಅಥವಾ ಬಟ್ಟೆಯಿಂದ ಮರಕ್ಕೆ ಕಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ಹೇಳಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.




































