
ಬೆಂಗಳೂರು: ರಾಜಧಾನಿ ಬೆಂಗಳೂರಿನ ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣಾ ಸರಹದ್ದಿನಲ್ಲಿ ಅತ್ಯಂತ ದುಃಖಕರ ಘಟನೆಯೊಂದು ವರದಿಯಾಗಿದೆ. ಪ್ರೇಮಿಗಳಿಬ್ಬರು ತಂಗಿದ್ದ ಲಾಡ್ಜ್ ಕೊಠಡಿಯೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ದುರ್ಘಟನೆಯಲ್ಲಿ ಮೃತಪಟ್ಟವರನ್ನು ಗದಗ ಜಿಲ್ಲೆಯ ನಿವಾಸಿಗಳಾದ ರಮೇಶ್ ಮತ್ತು ಕಾವೇರಿ ಎಂದು ಗುರುತಿಸಲಾಗಿದೆ. ಇವರಿಬ್ಬರೂ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಗಳಾಗಿದ್ದರು ಎಂದು ತಿಳಿದುಬಂದಿದೆ.
ಘಟನೆ ನಡೆದ ಸ್ಥಳವು ಯಲಹಂಕ ನ್ಯೂ ಟೌನ್‌ನಲ್ಲಿರುವ ‘ಕಿಚನ್-6 ಫ್ಯಾಮಿಲಿ ರೆಸ್ಟೋರೆಂಟ್’ ಕಟ್ಟಡದ ಮೂರನೇ ಮಹಡಿಯಲ್ಲಿದೆ. ಇದೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಲಾಡ್ಜ್‌ಗೆ ಆಗಮಿಸಿದ್ದ ಈ ಜೋಡಿ, ಒಂದು ಕೊಠಡಿಯನ್ನು ಪಡೆದಿದ್ದರು.
ಲಾಡ್ಜ್ ಕೊಠಡಿಗೆ ಬಂದ ಸ್ವಲ್ಪ ಸಮಯದ ನಂತರ, ಪ್ರೇಮಿಗಳು ಪೆಟ್ರೋಲ್ ಅನ್ನು ತಂದು ತಮ್ಮ ಶರೀರದ ಮೇಲೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸದ್ಯ ಈ ಕುರಿತು ಯಲಹಂಕ ನ್ಯೂ ಟೌನ್ ಠಾಣಾ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಘಟನೆ ಆತ್ಮಹತ್ಯೆಯೇ ಅಥವಾ ಬೇರೆ ಯಾವುದೇ ಕಾರಣಕ್ಕೆ ಬೆಂಕಿ ಅವಘಡ ಸಂಭವಿಸಿ ಇದೆಯೇ ಎಂಬ ನಿಖರ ಮಾಹಿತಿ ತನಿಖೆ ಪೂರ್ಣಗೊಂಡ ನಂತರ ತಿಳಿದುಬರಬೇಕಿದೆ. ಪ್ರೇಮಿಗಳ ಈ ದುರಂತ ನಿರ್ಧಾರಕ್ಕೆ ಕಾರಣ ಏನು ಎಂಬುದು ಸಹ ಸದ್ಯಕ್ಕೆ ನಿಗೂಢವಾಗಿದೆ.




































