
ಬೆಂಗಳೂರು: ನಟ ದರ್ಶನ್ ಅವರು ಪ್ರಸ್ತುತ ಪರಪ್ಪನ ಅಗ್ರಹಾರ ಜೈಲಿನ ಕ್ವಾರಂಟೈನ್ ಸೆಲ್‌ನಲ್ಲಿರುವ ಸಂದರ್ಭದಲ್ಲಿ, ಅವರಿಗೆ ಕೋರ್ಟ್ ಅನುಮತಿ ನೀಡಿದ ಬಳಿಕವೂ ಹೆಚ್ಚುವರಿ ಸವಲತ್ತುಗಳನ್ನು ನೀಡುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ದರ್ಶನ್ ಪರ ವಕೀಲರಾದ ಸುನೀಲ್ ಅವರು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಸಿಆರ್ಪಿಸಿ (CrPC) 310ರ ಅಡಿಯಲ್ಲಿ ಜೈಲಿನ ಖುದ್ದು ಪರಿಶೀಲನೆಗೆ ಆದೇಶ ನೀಡುವಂತೆ ಕೋರಿದ್ದಾರೆ.
ಈ ಹಿಂದೆ ಜೈಲು ಅಧಿಕಾರಿಗಳು, ಕೋರ್ಟ್ ಸೂಚನೆಯ ಮೇರೆಗೆ ಎಲ್ಲಾ ಆದೇಶಗಳನ್ನು ಪಾಲಿಸಿರುವುದಾಗಿ ಮಾಹಿತಿ ನೀಡಿದ್ದರು. ಆದರೆ, ಅಧಿಕಾರಿಗಳು ಆದೇಶವನ್ನು ಪಾಲಿಸಿಲ್ಲ ಮತ್ತು ನಟನಿಗೆ ಕನಿಷ್ಠ ಸೌಲಭ್ಯಗಳನ್ನು ಸಹ ನೀಡುತ್ತಿಲ್ಲ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಸದ್ಯ ಈ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 9ಕ್ಕೆ ನ್ಯಾಯಾಲಯವು ಮುಂದೂಡಿದೆ.
ದರ್ಶನ್ ಜೈಲು ಶಿಫ್ಟ್ ಹಿನ್ನೆಲೆ
ರೇಣುಕಾಸ್ವಾಮಿ ಪ್ರಕರಣದಲ್ಲಿ ಆರಂಭದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರು ಅಲ್ಲಿ ನಿಯಮ ಉಲ್ಲಂಘನೆ ಮಾಡಿದ್ದ ಕಾರಣಕ್ಕಾಗಿ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಬಳಿಕ ದರ್ಶನ್ ಈಗ ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ಬಾರಿ ಅವರ ವಿಚಾರದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಲಾಗುತ್ತಿದೆ.




































