
ನೀವು ನಿಮ್ಮ ಹಳೆಯ ಫೋನ್ ಮಾರಾಟ ಮಾಡಲು ಯೋಚಿಸುತ್ತಿದ್ದೀರಾ? ಹಾಗಿದ್ದರೆ ಕೇವಲ ಫ್ಯಾಕ್ಟರಿ ರೀಸೆಟ್ ಮಾಡಿಬಿಟ್ಟರೆ ಸಾಕು ಎಂದು ನೀವು ತಿಳಿದಿದ್ದರೆ ಅದು ತಪ್ಪು. ಫ್ಯಾಕ್ಟರಿ ರೀಸೆಟ್ ನಂತರವೂ ನಿಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರಗಳು, ಮತ್ತು ಇಮೇಲ್ ಪಾಸ್‌ವರ್ಡ್‌ಗಳು ಕಳ್ಳರ ಕೈಗೆ ಸಿಗುವ ಸಾಧ್ಯತೆಗಳು ಇವೆ. ಇದು ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಬಹುದು. ಆದ್ದರಿಂದ ನಿಮ್ಮ ಹಳೆಯ ಫೋನ್ ಅನ್ನು ಮಾರಾಟ ಮಾಡುವ ಮೊದಲು ಡೇಟಾ ಸಂಪೂರ್ಣವಾಗಿ ಅಳಿಸಿಹೋಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.
ವಾಸ್ತವವಾಗಿ, ಫೋನ್‌ನಿಂದ ಫೋಟೊಗಳು, ವಿಡಿಯೋಗಳು ಅಥವಾ ಫೈಲ್‌ಗಳನ್ನು ಅಳಿಸುವುದರಿಂದ ಡೇಟಾ ಸಂಪೂರ್ಣವಾಗಿ ನಾಶವಾಗುವುದಿಲ್ಲ. ವಿಶೇಷ ಸಾಫ್ಟ್‌ವೇರ್ ಬಳಸಿ ಅವುಗಳನ್ನು ಮರಳಿ ಪಡೆಯಲು ಸಾಧ್ಯವಿದೆ. ಈ ಕಾರಣಕ್ಕಾಗಿಯೇ ನಿಮ್ಮ ಹಳೆಯ ಫೋನ್ ಅನ್ನು ಬೇರೆಯವರಿಗೆ ನೀಡುವ ಮೊದಲು ಅಥವಾ ಮಾರಾಟ ಮಾಡುವ ಮೊದಲು ಅದರಲ್ಲಿನ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿ ತೆಗೆದುಹಾಕುವ ಅವಶ್ಯಕತೆ ಇದೆ. ಈ ಪ್ರಕ್ರಿಯೆಯಲ್ಲಿ ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಉತ್ತಮ.
ಡೇಟಾ ಸುರಕ್ಷತೆ ಮತ್ತು ಗೂಗಲ್ ಖಾತೆ
ಆಂಡ್ರಾಯ್ಡ್ 5.0 (ಲಾಲಿಪಪ್) ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಫೋನ್‌ಗಳಲ್ಲಿ, ಫ್ಯಾಕ್ಟರಿ ರೀಸೆಟ್ ಪ್ರೊಟೆಕ್ಷನ್ (FRP) ವೈಶಿಷ್ಟ್ಯವು ಇರುತ್ತದೆ. ನಿಮ್ಮ ಗೂಗಲ್ ಖಾತೆಯನ್ನು ತೆಗೆದುಹಾಕದೇ ಫೋನ್ ರೀಸೆಟ್ ಮಾಡಿದರೆ, ಹೊಸ ಬಳಕೆದಾರರು ಫೋನ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನಿಮ್ಮ ಗೂಗಲ್ ಖಾತೆಯನ್ನು ಫೋನ್‌ನಿಂದ ಮೊದಲು ತೆಗೆದುಹಾಕಬೇಕು. ಇದನ್ನು ಮಾಡಲು,
- ನಿಮ್ಮ ಫೋನ್‌ನ ‘ಸೆಟ್ಟಿಂಗ್ಸ್’ ತೆರೆಯಿರಿ.
- ನಂತರ ‘ಅಕೌಂಟ್ಸ್’ (ಖಾತೆಗಳು) ವಿಭಾಗಕ್ಕೆ ಹೋಗಿ.
- ಅಲ್ಲಿ ನಿಮ್ಮ ಗೂಗಲ್ ಖಾತೆಯನ್ನು ಆಯ್ಕೆ ಮಾಡಿ.
- ‘ರಿಮೂವ್ ಅಕೌಂಟ್’ (ಖಾತೆಯನ್ನು ಅಳಿಸಿ) ಆಯ್ಕೆಯನ್ನು ಕ್ಲಿಕ್ ಮಾಡಿ.
ನಕಲಿ ಡೇಟಾವನ್ನು ತುಂಬಿಸುವುದು ಏಕೆ ಮುಖ್ಯ?
ಕೇವಲ ಫ್ಯಾಕ್ಟರಿ ರೀಸೆಟ್ ಮಾಡುವುದರಿಂದ ಡೇಟಾ ಸಂಪೂರ್ಣವಾಗಿ ಅಳಿಸಿಹೋಗುವುದಿಲ್ಲ, ಕೆಲವೊಮ್ಮೆ ಅದನ್ನು ಪುನಃ ಪಡೆಯಲು ಸಾಧ್ಯವಿದೆ. ಇದನ್ನು ತಪ್ಪಿಸಲು, ಫ್ಯಾಕ್ಟರಿ ರೀಸೆಟ್ ಮಾಡುವ ಮೊದಲು ಫೋನ್‌ನ ಮೆಮೊರಿಯನ್ನು ಅನಗತ್ಯ ಮತ್ತು ನಕಲಿ ಫೈಲ್‌ಗಳಿಂದ ತುಂಬಿಸಿ. ಇದು ಹಿಂದಿನ ವೈಯಕ್ತಿಕ ಡೇಟಾವನ್ನು ಸಂಪೂರ್ಣವಾಗಿ ಅಳಿಸಿ ಹಾಕುತ್ತದೆ.
- ಫ್ಯಾಕ್ಟರಿ ರೀಸೆಟ್ ಮಾಡುವ ಮೊದಲು, ಫೋನ್‌ನಲ್ಲಿ ದೊಡ್ಡ ವಿಡಿಯೋಗಳು, ಹಾಡುಗಳು ಅಥವಾ ಯಾವುದೇ ಬೇಡವಾದ ಫೈಲ್‌ಗಳನ್ನು ಸ್ಟೋರ್ ಮಾಡಿ.
- ಇದು ನಿಮ್ಮ ಫೋನ್‌ನ ಸಂಗ್ರಹಣೆಯನ್ನು ತುಂಬಿಸುತ್ತದೆ ಮತ್ತು ಹಳೆಯ ಡೇಟಾದ ಮೇಲೆ ಈ ಹೊಸ ಫೈಲ್‌ಗಳು ಬರೆಯಲ್ಪಡುತ್ತವೆ.
- ಈಗ, ಯಾರಾದರೂ ಡೇಟಾವನ್ನು ಪುನಃ ಪಡೆಯಲು ಪ್ರಯತ್ನಿಸಿದರೆ, ಅವರಿಗೆ ಈ ಜಂಕ್ ಫೈಲ್‌ಗಳು ಮಾತ್ರ ಸಿಗುತ್ತವೆ. ಇದರಿಂದ ನಿಮ್ಮ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿರುತ್ತದೆ.
ಡೇಟಾ ಬ್ಯಾಕಪ್ ಮಾಡುವುದು ಹೇಗೆ?
ಹೊಸ ಫೋನ್‌ಗೆ ನಿಮ್ಮ ಡೇಟಾವನ್ನು ವರ್ಗಾಯಿಸಲು ಅಥವಾ ಭವಿಷ್ಯದ ಉಪಯೋಗಕ್ಕಾಗಿ ಅದನ್ನು ಉಳಿಸಿಕೊಳ್ಳಲು, ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡುವುದು ಮುಖ್ಯ.
- ಆಂಡ್ರಾಯ್ಡ್ ಫೋನ್‌ಗಾಗಿ: ‘ಸೆಟ್ಟಿಂಗ್ಸ್’ ತೆರೆದು ‘ಗೂಗಲ್’ ಆಯ್ಕೆ ಮಾಡಿ. ನಂತರ ‘ಬ್ಯಾಕಪ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಮತ್ತು ‘ಬ್ಯಾಕಪ್ ನೌ’ ಬಟನ್ ಒತ್ತಿ.
- ಗೂಗಲ್ ಫೋಟೋಗಳಿಗಾಗಿ: ಗೂಗಲ್ ಫೋಟೋಸ್ ಅಪ್ಲಿಕೇಶನ್ ತೆರೆಯಿರಿ, ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ಕ್ಲಿಕ್ ಮಾಡಿ. ‘ಸೆಟ್ಟಿಂಗ್ಸ್’ ಗೆ ಹೋಗಿ, ‘ಬ್ಯಾಕಪ್’ ಆಯ್ಕೆ ಮಾಡಿ ಮತ್ತು ಬ್ಯಾಕಪ್ ಆನ್ ಮಾಡಿ.
ಈ ಎಲ್ಲ ಕ್ರಮಗಳನ್ನು ಸರಿಯಾಗಿ ಪಾಲಿಸುವುದರಿಂದ ನಿಮ್ಮ ಹಳೆಯ ಫೋನ್ ಸುರಕ್ಷಿತವಾಗಿ ಮಾರಾಟವಾಗುತ್ತದೆ, ಮತ್ತು ನಿಮ್ಮ ವೈಯಕ್ತಿಕ ಮಾಹಿತಿ ಬೇರೆಯವರ ಕೈಗೆ ಸಿಗುವುದಿಲ್ಲ.



































