
ಇಂದಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್ ಕೇವಲ ಸಂವಹನ ಸಾಧನವಾಗಿ ಉಳಿದಿಲ್ಲ, ಅದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ ನಾವು ಆಪತ್ತು ತಂದೊಡ್ಡುವ ಕೆಲವು ಅಪ್ಲಿಕೇಶನ್‌ಗಳನ್ನು ನಮ್ಮ ಮೊಬೈಲ್‌ನಲ್ಲಿ ಇಟ್ಟುಕೊಂಡು ಅಪಾಯವನ್ನು ಆಹ್ವಾನಿಸುತ್ತಿದ್ದೇವೆ. ಇತ್ತೀಚಿನ ಸೈಬರ್ ಭದ್ರತಾ ವರದಿಗಳ ಪ್ರಕಾರ, ನಾವು ದಿನನಿತ್ಯ ಬಳಸುವ ಹತ್ತಾರು ಆ್ಯಪ್‌ಗಳು ನಮ್ಮ ಅನುಮತಿಯಿಲ್ಲದೆ ಖಾಸಗಿ ದತ್ತಾಂಶವನ್ನು ಕದಿಯುತ್ತಿವೆ. ಫೋಟೋಗಳು, ಬ್ಯಾಂಕಿಂಗ್ ವಿವರಗಳು ಮತ್ತು ನಮ್ಮ ಲೊಕೇಶನ್ ಮಾಹಿತಿಯನ್ನು ಈ ಆ್ಯಪ್‌ಗಳು ಮೂರನೇ ವ್ಯಕ್ತಿಗಳಿಗೆ ಅಥವಾ ಅಕ್ರಮ ಸರ್ವರ್‌ಗಳಿಗೆ ರವಾನಿಸುತ್ತಿವೆ.
ಡಾಟಾ ಕಳವು ಮಾಡುವ ಅಪಾಯಕಾರಿ ಆ್ಯಪ್‌ಗಳ ಪಟ್ಟಿ:
- ಉಚಿತ ವಿಪಿಎನ್ (Free VPN): ಸುರಕ್ಷತೆಯ ಹೆಸರಿನಲ್ಲಿ ಡೌನ್‌ಲೋಡ್ ಮಾಡಲಾಗುವ ಈ ಆ್ಯಪ್‌ಗಳು ಬಳಕೆದಾರರ ಇಂಟರ್ನೆಟ್ ಬ್ರೌಸಿಂಗ್ ಹಿಸ್ಟರಿಯನ್ನು ಸಂಗ್ರಹಿಸಿ ಜಾಹೀರಾತು ಕಂಪನಿಗಳಿಗೆ ಮಾರಾಟ ಮಾಡುತ್ತಿವೆ. ಇವು ನಿಮ್ಮ ಐಪಿ ಅಡ್ರೆಸ್ ಮತ್ತು ವೈಯಕ್ತಿಕ ಫೈಲ್‌ಗಳನ್ನು ಸಹ ಸುಲಭವಾಗಿ ಪ್ರವೇಶಿಸಬಲ್ಲವು.
- ನಕಲಿ ಯುಟಿಲಿಟಿ ಆ್ಯಪ್‌ಗಳು: ಫೋನ್ ವೇಗಗೊಳಿಸುವ ‘ಬೂಸ್ಟರ್’ಗಳು, ಬ್ಯಾಟರಿ ಸೇವರ್‌ಗಳು ಮತ್ತು ಅನಗತ್ಯ ಫ್ಲ್ಯಾಶ್‌ಲೈಟ್ ಆ್ಯಪ್‌ಗಳು ಸ್ಮಾರ್ಟ್‌ಫೋನ್‌ನ ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಾ ಫೋನ್ ಕಾಲ್ ರೆಕಾರ್ಡ್ ಹಾಗೂ ಮೆಸೇಜ್‌ಗಳನ್ನು ಕದಿಯುತ್ತವೆ.
- ಎಡಿಟಿಂಗ್ ಮತ್ತು ಫಿಲ್ಟರ್ ಆ್ಯಪ್‌ಗಳು: ಮುಖದ ಚಹರೆಯನ್ನು ಬದಲಿಸುವ ಅಥವಾ ಫೋಟೋ ಎಡಿಟ್ ಮಾಡುವ ಆ್ಯಪ್‌ಗಳು ನಿಮ್ಮ ಬಯೋಮೆಟ್ರಿಕ್ ಡೇಟಾವನ್ನು (ಮುಖದ ಗುರುತು) ಕದಿಯುವ ಸಾಧ್ಯತೆ ಇರುತ್ತದೆ. ಇದು ಭವಿಷ್ಯದಲ್ಲಿ ಡಿಜಿಟಲ್ ದರೋಡೆಗೆ ದಾರಿಯಾಗಬಹುದು.
ಬಳಕೆದಾರರು ಆ್ಯಪ್ ಇನ್‌ಸ್ಟಾಲ್ ಮಾಡುವ ಮುನ್ನ ಅವು ಕೇಳುವ ‘ಪರ್ಮಿಷನ್’ಗಳ ಬಗ್ಗೆ ಎಚ್ಚರ ವಹಿಸಬೇಕು. ಕ್ಯಾಮರಾ ಅಥವಾ ಗ್ಯಾಲರಿ ಪ್ರವೇಶದ ಅಗತ್ಯವಿಲ್ಲದ ಆ್ಯಪ್‌ಗಳಿಗೆ ಅಂತಹ ಅನುಮತಿ ನೀಡಬಾರದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಸ್ಮಾರ್ಟ್‌ಫೋನ್ ಸುರಕ್ಷತೆಗೆ ಈ ಕ್ರಮಗಳನ್ನು ಅನುಸರಿಸಿ
ನಿಮ್ಮ ವೈಯಕ್ತಿಕ ಮಾಹಿತಿ ರಕ್ಷಿಸಿಕೊಳ್ಳುವುದು ಹೇಗೆ?
- ಅನಗತ್ಯ ಆ್ಯಪ್‌ಗಳನ್ನು ಡಿಲೀಟ್ ಮಾಡಿ: ನೀವು ಬಳಸದ ಅಥವಾ ಸಂಶಯಾಸ್ಪದ ಎನಿಸುವ ಅಪ್ಲಿಕೇಶನ್‌ಗಳನ್ನು ತಕ್ಷಣ ಫೋನ್‌ನಿಂದ ತೆಗೆದುಹಾಕಿ.
- ಅಪ್‌ಡೇಟ್ ಮುಖ್ಯ: ನಿಮ್ಮ ಫೋನ್‌ನ ಸಾಫ್ಟ್‌ವೇರ್ ಮತ್ತು ಆ್ಯಪ್‌ಗಳನ್ನು ಆಗಾಗ ಅಪ್‌ಡೇಟ್ ಮಾಡುತ್ತಿರಿ, ಇದು ಭದ್ರತಾ ಕವಚವನ್ನು ಬಲಪಡಿಸುತ್ತದೆ.



































