
ಆಧುನಿಕ ಪೋಷಕರು ಮಕ್ಕಳ ಹಠವನ್ನು ಶಮನ ಮಾಡಲು ಸುಲಭ ದಾರಿಯಾಗಿ ಮೊಬೈಲ್ ಫೋನ್ ನೀಡುತ್ತಿದ್ದು, ಇದು ಮಕ್ಕಳ ಭವಿಷ್ಯದ ಮೇಲೆ ‘ಡಿಜಿಟಲ್ ವಿಷ‘ವಾಗಿ ಪರಿಣಾಮ ಬೀರುತ್ತಿದೆ. 2013 ರಿಂದ 2025 ರ ನಡುವೆ ಜನಿಸಿದ ‘ಆಲ್ಫಾ ಜನರೇಷನ್’ ಮಕ್ಕಳು ಹುಟ್ಟುತ್ತಲೇ ಸ್ಮಾರ್ಟ್‌ಫೋನ್ ಸಂಸ್ಕೃತಿಗೆ ತೆರೆದುಕೊಂಡಿದ್ದು, ಇದರಿಂದ ಅವರಲ್ಲಿ ‘ವರ್ಚುವಲ್ ಆಟಿಸಂ’ ನಂತಹ ಗಂಭೀರ ಬುದ್ಧಿಮಾಂದ್ಯತೆಯ ಲಕ್ಷಣಗಳು ಕಂಡುಬರುತ್ತಿವೆ. ವಯಸ್ಕರಿಗಿಂತ ಮಕ್ಕಳ ತಲೆಬುರುಡೆ 50 ರಷ್ಟು ತೆಳುವಾಗಿರುವುದರಿಂದ ಮೊಬೈಲ್ ವಿಕಿರಣಗಳು ನೇರವಾಗಿ ಮೆದುಳಿನ ಮೇಲೆ ಪ್ರಭಾವ ಬೀರುತ್ತಿವೆ. ಇದರಿಂದಾಗಿ ಲಕ್ಷದಲ್ಲಿ ಒಬ್ಬರಿಗೆ ಬರುತ್ತಿದ್ದ ಎಡಿಎಚ್‌ಡಿ (ADHD) ಅಂತಹ ಸಮಸ್ಯೆಗಳು ಇಂದು ಪ್ರತಿಯೊಂದು ಮನೆಯ ಮಗುವನ್ನೂ ಕಾಡುತ್ತಿವೆ.
ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಅವರಲ್ಲಿ ಏಕಾಗ್ರತೆ ಶೂನ್ಯವಾಗುತ್ತಿದೆ. ಶಿಕ್ಷಕರ ವರದಿಗಳ ಪ್ರಕಾರ, ಇಂದಿನ ಮಕ್ಕಳು ಕನಿಷ್ಠ 3 ನಿಮಿಷ ಕೂಡ ಒಂದೇ ಕಡೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಮೊಬೈಲ್‌ನ ಡೋಪಮೈನ್ ಸೆಳೆತಕ್ಕೆ ಸಿಲುಕಿರುವ ಮಕ್ಕಳು ಫೋನ್ ಕಿತ್ತುಕೊಂಡರೆ ಅತಿಯಾದ ಕೋಪ, ವಸ್ತುಗಳನ್ನು ಎಸೆಯುವುದು ಮತ್ತು ಊಟ ಮಾಡದ ಹಠ ಪ್ರವೃತ್ತಿ ಬೆಳೆಸಿಕೊಳ್ಳುತ್ತಿದ್ದಾರೆ. ಇದು ಕೇವಲ ವರ್ತನೆಯ ಬದಲಾವಣೆಯಲ್ಲ, ಬದಲಿಗೆ ಮಕ್ಕಳ ಐಕ್ಯೂ (IQ) ಮತ್ತು ಗ್ರಹಣ ಶಕ್ತಿಯನ್ನೇ ಕುಂಠಿತಗೊಳಿಸುತ್ತಿರುವ ಗಂಭೀರ ಸಾಮಾಜಿಕ ಆರೋಗ್ಯ ಸಮಸ್ಯೆಯಾಗಿದೆ.



































