
ಅಧಿಕ ಕೊಲೆಸ್ಟ್ರಾಲ್ ಸಾಮಾನ್ಯವಾಗಿ ಯಾವುದೇ ಸ್ಪಷ್ಟ ಲಕ್ಷಣಗಳನ್ನು ತೋರಿಸುವುದಿಲ್ಲ, ಆದರೆ ಅದು ದೇಹದಲ್ಲಿ ಅಪಾಯಕಾರಿ ಮಟ್ಟವನ್ನು ತಲುಪಿದಾಗ ಕೆಲವು ಚಿಹ್ನೆಗಳು ಕಾಣಿಸಿಕೊಳ್ಳಬಹುದು. ಹಿಂದೆಲ್ಲಾ ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಸಮಸ್ಯೆ ಈಗ ಕಳಪೆ ಆಹಾರ, ವ್ಯಾಯಾಮದ ಕೊರತೆ ಮತ್ತು ಅನುವಂಶಿಕ ಕಾರಣಗಳಿಂದಾಗಿ ಯುವಕರನ್ನೂ ಕಾಡುತ್ತಿದೆ. ಯುವಕರಲ್ಲಿ ಕಾಣಿಸಿಕೊಳ್ಳಬಹುದಾದ ಅಧಿಕ ಕೊಲೆಸ್ಟ್ರಾಲ್‌ನ ಕೆಲವು ಪ್ರಮುಖ ಲಕ್ಷಣಗಳು ಇಲ್ಲಿವೆ.

ಯುವಕರಲ್ಲಿ ಅಧಿಕ ಕೊಲೆಸ್ಟ್ರಾಲ್‌ನ ಪ್ರಮುಖ ಲಕ್ಷಣಗಳು
- ಚಟುವಟಿಕೆಯ ಸಮಯದಲ್ಲಿ ಎದೆ ನೋವು: ವ್ಯಾಯಾಮದ ಸಮಯದಲ್ಲಿ ಎದೆ ನೋವು ಅಥವಾ ಅಸ್ವಸ್ಥತೆ ಕಾಣಿಸಿಕೊಂಡರೆ ಅದು ಕೇವಲ ಸ್ನಾಯು ನೋವಾಗಿರದೆ ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಯ ಆರಂಭಿಕ ಸಂಕೇತವಾಗಿರಬಹುದು. ಇದು ಹೃದಯಕ್ಕೆ ರಕ್ತದ ಹರಿವು ಕಡಿಮೆಯಾಗಿರುವುದನ್ನು ಸೂಚಿಸುತ್ತದೆ. ಈ ಲಕ್ಷಣ ಪುನರಾವರ್ತಿತವಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
- ಚರ್ಮದ ಮೇಲೆ ಗಂಟುಗಳು (ಕ್ಸಾಂಥೋಮಾ): ಮೊಣಕೈ, ಮೊಣಕಾಲು, ಕೈ ಮತ್ತು ಪಾದಗಳ ಮೇಲೆ ನೋವುರಹಿತ ಗಂಟುಗಳು ಕಾಣಿಸಿಕೊಂಡರೆ ಅವುಗಳನ್ನು ಕ್ಸಾಂಥೋಮಾ ಎಂದು ಕರೆಯಲಾಗುತ್ತದೆ. ಇವು ಚರ್ಮದ ಅಡಿಯಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಶೇಖರಣೆಯಾಗಿ ಉಂಟಾಗುತ್ತವೆ. ಯುವಕರಲ್ಲಿ ಇದು ಆನುವಂಶಿಕ ಹೈಪರ್‌ಕೊಲೆಸ್ಟರಾಲ್ಮಿಯಾ ಎಂಬ ಸ್ಥಿತಿಯ ಸೂಚನೆಯಾಗಿರಬಹುದು.
- ಕಣ್ಣುಗಳ ಸುತ್ತ ಹಳದಿ ಶೇಖರಣೆ (ಕ್ಸಾಂಥೆಲಾಸ್ಮಾ): ಕಣ್ಣುರೆಪ್ಪೆಗಳ ಒಳಭಾಗದಲ್ಲಿ ಅಥವಾ ಅದರ ಸುತ್ತಲೂ ಹಳದಿ ಬಣ್ಣದ ಮೃದುವಾದ ತೇಪೆಗಳು ಕಾಣಿಸಿಕೊಂಡರೆ ಅದು ಕ್ಸಾಂಥೆಲಾಸ್ಮಾ ಆಗಿರಬಹುದು. ಇದು ಕೂಡ ಚರ್ಮದ ಅಡಿಯಲ್ಲಿ ಕೊಲೆಸ್ಟ್ರಾಲ್ ಶೇಖರಣೆಯಿಂದ ಉಂಟಾಗುತ್ತದೆ. ಇದು ನೇರವಾಗಿ ಹಾನಿಕಾರಕವಲ್ಲದಿದ್ದರೂ, ಲಿಪಿಡ್ ಅಸ್ವಸ್ಥತೆಯ ಸ್ಪಷ್ಟ ಸಂಕೇತವಾಗಿದೆ.
- ನಡೆಯುವಾಗ ಕಾಲು ಸೆಳೆತ: ಕೆಲವೊಮ್ಮೆ ನಡೆಯುವಾಗ ಕಾಲುಗಳಲ್ಲಿ ನೋವು ಅಥವಾ ಸೆಳೆತ ಕಾಣಿಸಿಕೊಳ್ಳಬಹುದು. ಇದನ್ನು ಕ್ಲಾಡಿಕೇಶನ್ ಎಂದು ಕರೆಯಲಾಗುತ್ತದೆ. ಇದು ಅಪಧಮನಿಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆಗೊಂಡು ಉಂಟಾಗುವ ‘ಪರಿಧಮನಿಯ ಅಪಧಮನಿ ಕಾಯಿಲೆ’ಯ ಸಂಕೇತವಾಗಿರಬಹುದು.
- ಕುಟುಂಬದ ಇತಿಹಾಸ: ನಿಮ್ಮ ಕುಟುಂಬದಲ್ಲಿ ಯಾರಿಗಾದರೂ ಹೃದ್ರೋಗ ಅಥವಾ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ, ನಿಮ್ಮ ಜೀವನಶೈಲಿ ಎಷ್ಟೇ ಉತ್ತಮವಾಗಿದ್ದರೂ ನೀವು ಅಪಾಯದಲ್ಲಿರುತ್ತೀರಿ. ಇಂತಹ ಸಂದರ್ಭದಲ್ಲಿ ವೈದ್ಯಕೀಯ ತಪಾಸಣೆ ಮತ್ತು ಸೂಕ್ತ ಜೀವನಶೈಲಿ ಬದಲಾವಣೆಗಳು ದೀರ್ಘಾವಧಿಯ ಆರೋಗ್ಯಕ್ಕೆ ಅತ್ಯಗತ್ಯ.
ಈ ಯಾವುದೇ ಲಕ್ಷಣಗಳು ನಿಮ್ಮಲ್ಲಿ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ.