
ಇಂದಿನ ವೇಗದ ಜೀವನಶೈಲಿಯಲ್ಲಿ ಸಮಯ ಉಳಿಸಲು ಹಲವರು ಮಾಡುವ ಸಾಮಾನ್ಯ ತಪ್ಪು ಎಂದರೆ ಚಪಾತಿ ಹಿಟ್ಟನ್ನು ಒಮ್ಮೆಲೇ ಹೆಚ್ಚಿನ ಪ್ರಮಾಣದಲ್ಲಿ ಕಲಸಿ ಫ್ರಿಜ್‌ನಲ್ಲಿ ಇಡುವುದು. ಮಹಿಳೆಯರು ಕೆಲಸದ ಒತ್ತಡದ ನಡುವೆ ಮರುದಿನದ ಅಡುಗೆ ಸುಲಭವಾಗಲಿ ಎಂದು ಈ ರೀತಿ ಮಾಡುತ್ತಾರೆ. ಆದರೆ, 24 ಗಂಟೆಗಳಿಗಿಂತ ಹೆಚ್ಚು ಕಾಲ ರೆಫ್ರಿಜರೇಟರ್‌ನಲ್ಲಿ ಇರಿಸಿದ ಹಿಟ್ಟಿನಿಂದ ತಯಾರಿಸಿದ ಚಪಾತಿ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಅದೆಷ್ಟು ಮಾರಕ ಎಂಬುದು ನಿಮಗೆ ತಿಳಿದಿದೆಯೇ? ಈ ಕುರಿತು ಆರೋಗ್ಯ ತಜ್ಞರು ಹಾಗೂ ಫಿಟ್‌ನೆಸ್ ತಜ್ಞರು ನೀಡಿರುವ ಎಚ್ಚರಿಕೆಯ ಪೂರ್ಣ ಮಾಹಿತಿ ಇಲ್ಲಿದೆ.
ಹಳೆಯ ಹಿಟ್ಟಿನಿಂದ ಆರೋಗ್ಯಕ್ಕೆ ಅಡ್ಡಪರಿಣಾಮ
ಪ್ರಖ್ಯಾತ ಫಿಟ್‌ನೆಸ್ ತರಬೇತುದಾರ ಪ್ರಿಯಾಂಕ್ ಮೆಹ್ತಾ ಅವರು ಈ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದು, ಫ್ರಿಜ್‌ನಲ್ಲಿ ಹಿಟ್ಟನ್ನು ಸಂಗ್ರಹಿಸುವುದರಿಂದ ಅದರ ಗುಣಮಟ್ಟ ಸಂಪೂರ್ಣವಾಗಿ ಕುಸಿಯುತ್ತದೆ ಎಂದು ತಿಳಿಸಿದ್ದಾರೆ. ಸಾಮಾನ್ಯವಾಗಿ 24 ಗಂಟೆಗಳ ನಂತರ ಹಿಟ್ಟು ತನ್ನ ನೈಸರ್ಗಿಕ ಪೋಷಕಾಂಶಗಳನ್ನು ಕಳೆದುಕೊಳ್ಳಲು ಆರಂಭಿಸುತ್ತದೆ. ಶೀತ ತಾಪಮಾನದಲ್ಲಿ ಬ್ಯಾಕ್ಟೀರಿಯಾಗಳ ಬೆಳವಣಿಗೆ ನಿಧಾನವಾಗುತ್ತದೆಯೇ ಹೊರತು ಸಂಪೂರ್ಣವಾಗಿ ನಿಲ್ಲುವುದಿಲ್ಲ. ಇದು ಕಾಲಕ್ರಮೇಣ ಹಿಟ್ಟಿನಲ್ಲಿ ಇಂಗಾಲದ ಡೈಆಕ್ಸೈಡ್ ಉತ್ಪತ್ತಿಯಾಗಲು ಕಾರಣವಾಗಿ, ಚಪಾತಿಯ ರುಚಿ ಹಾಗೂ ವಿನ್ಯಾಸವನ್ನು ಬದಲಿಸುತ್ತದೆ.
ಜೀರ್ಣಕ್ರಿಯೆ ಮತ್ತು ಮಧುಮೇಹದ ಮೇಲೆ ಪ್ರಭಾವ
ಫ್ರಿಜ್‌ನಲ್ಲಿಟ್ಟ ಹಿಟ್ಟಿನಲ್ಲಿ ಹುದುಗುವಿಕೆ (Fermentation) ಪ್ರಕ್ರಿಯೆ ವೇಗವಾಗಿ ನಡೆಯುವುದರಿಂದ ಅದರಲ್ಲಿರುವ ಗ್ಲುಟನ್ ಅಂಶ ದುರ್ಬಲಗೊಳ್ಳುತ್ತದೆ. ಇಂತಹ ಹಿಟ್ಟಿನಿಂದ ಮಾಡಿದ ಚಪಾತಿಗಳು ಜೀರ್ಣಿಸಿಕೊಳ್ಳಲು ಕಷ್ಟಕರವಾಗಿದ್ದು, ಪದೇ ಪದೇ ಇದನ್ನು ಸೇವಿಸುವುದರಿಂದ ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಖ್ಯವಾಗಿ ಮಧುಮೇಹಿಗಳಿಗೆ ಇದು ಹೆಚ್ಚು ಅಪಾಯಕಾರಿ. ಏಕೆಂದರೆ ಹಳೆಯ ಹಿಟ್ಟಿನಲ್ಲಿ ಪಿಷ್ಟದ ಅಂಶ ಶೀಘ್ರವಾಗಿ ಕಡಿಮೆಯಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದಿಢೀರ್ ಏರಿಕೆ ಮಾಡುತ್ತದೆ.
ಚಪಾತಿ ಹಿಟ್ಟು ಕೆಟ್ಟಿರುವುದನ್ನು ಪತ್ತೆಹಚ್ಚುವುದು ಹೇಗೆ?
ಹಿಟ್ಟು ಕೆಟ್ಟಿದೆಯೇ ಎಂಬುದನ್ನು ತಿಳಿಯಲು ಈ ಕೆಳಗಿನ ಲಕ್ಷಣಗಳನ್ನು ಗಮನಿಸಿ:
- ಹಿಟ್ಟಿನ ಬಣ್ಣ ಕಪ್ಪು ಅಥವಾ ಹಸಿರು ಬಣ್ಣಕ್ಕೆ ತಿರುಗಿದ್ದರೆ.
- ಹಿಟ್ಟಿನಿಂದ ಅತಿಯಾದ ಹುಳಿ ವಾಸನೆ ಬರುತ್ತಿದ್ದರೆ.
- ಹಿಟ್ಟನ್ನು ಮುಟ್ಟಿದಾಗ ಅತಿಯಾದ ಜಿಗುಟುತನ ಅಥವಾ ಲೋಳೆಯಂತಹ ಅಂಶ ಕಂಡುಬಂದರೆ.
ತಜ್ಞರ ಪ್ರಕಾರ, ದಿನಕ್ಕೆ ಎಷ್ಟು ಬೇಕೋ ಅಷ್ಟು ಹಿಟ್ಟನ್ನು ಮಾತ್ರ ಕಲಸಿಕೊಳ್ಳುವುದು ಉತ್ತಮ. ಕೇವಲ 15 ನಿಮಿಷಗಳ ಸಮಯ ಉಳಿಸಲು ಹೋಗಿ ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಳ್ಳಬೇಡಿ.




































