
ಅನಾರೋಗ್ಯದ ಸಮಯದಲ್ಲಿ ಅಥವಾ ಚೇತರಿಕೆಯ ನಂತರ ರೋಗಿಗಳಿಗೆ ವೈದ್ಯರು ಹೆಚ್ಚಾಗಿ ದಾಳಿಂಬೆ ಜ್ಯೂಸ್ ಕುಡಿಯುವಂತೆ ಸೂಚಿಸುವುದನ್ನು ನೀವು ನೋಡಿರಬಹುದು. ಏಕೆಂದರೆ, ದಾಳಿಂಬೆ ಸೇವನೆಯು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ದಾಳಿಂಬೆಯ ಬೀಜಗಳಿಂದ ಹಿಡಿದು ಅದರ ರಸ ಮತ್ತು ಸಿಪ್ಪೆಯವರೆಗೂ ಅಪಾರವಾದ ಔಷಧೀಯ ಗುಣಗಳನ್ನು ಹೊಂದಿದೆ.
ದಾಳಿಂಬೆಯ ಪೋಷಕಾಂಶ ಮತ್ತು ಪ್ರಯೋಜನಗಳು
ದಾಳಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ಕಬ್ಬಿಣಾಂಶವಿದೆ, ಇದು ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ರೋಗದಿಂದ ಚೇತರಿಸಿಕೊಳ್ಳುವವರಿಗೆ ಇದು ಅತ್ಯಂತ ಸಹಕಾರಿ. ಇದರ ಜೊತೆಗೆ, ದಾಳಿಂಬೆ ಬೀಜಗಳು ಕಾರ್ಬೋಹೈಡ್ರೇಟ್‌ಗಳು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಟ್ಯಾನಿನ್‌ಗಳು ಮತ್ತು ವಿಟಮಿನ್‌ಗಳಲ್ಲಿ ಸಮೃದ್ಧವಾಗಿವೆ. ಆಯುರ್ವೇದದಲ್ಲಿ, ಇದರ ಬೀಜಗಳು, ಎಲೆಗಳು, ಬೇರುಗಳು, ಹೂವುಗಳು ಮತ್ತು ಸಿಪ್ಪೆ ಎಲ್ಲವೂ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ದಾಳಿಂಬೆ ಬಳಕೆಯ ಮನೆಮದ್ದುಗಳು
- ಹಸಿವು ಮತ್ತು ಜೀರ್ಣಕ್ರಿಯೆ ಸುಧಾರಣೆ: ಕಡಿಮೆ ಹಸಿವು ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ದಾಳಿಂಬೆ ಬೀಜಗಳು ಪ್ರಯೋಜನಕಾರಿಯಾಗಿವೆ. ಮೂರು ಚಮಚ ದಾಳಿಂಬೆ ರಸದಲ್ಲಿ ಒಂದು ಚಮಚ ಜೀರಿಗೆ ಮತ್ತು ಬೆಲ್ಲವನ್ನು ಬೆರೆಸಿ ಊಟದ ನಂತರ ಸೇವಿಸುವುದರಿಂದ ಜೀರ್ಣಕ್ರಿಯೆ ಸುಧಾರಣೆಯಾಗುತ್ತದೆ.
- ಹೊಟ್ಟೆನೋವು ಮತ್ತು ಅತಿಸಾರ: ಅರ್ಧ ಕಪ್ ದಾಳಿಂಬೆ ರಸಕ್ಕೆ ಕರಿಮೆಣಸು ಮತ್ತು ಉಪ್ಪನ್ನು ಬೆರೆಸಿ ಕುಡಿಯುವುದರಿಂದ ಹೊಟ್ಟೆನೋವು ನಿವಾರಣೆಯಾಗುತ್ತದೆ. 10-15 ಗ್ರಾಂ ಒಣ ದಾಳಿಂಬೆ ಸಿಪ್ಪೆಯ ಪುಡಿ, ಎರಡು ಲವಂಗದ ಪುಡಿಯನ್ನು ನೀರಿನಲ್ಲಿ ಕುದಿಸಿ ದಿನಕ್ಕೆ ಮೂರು ಬಾರಿ ಕುಡಿದರೆ ಅತಿಸಾರದಿಂದ ಮುಕ್ತಿ ಪಡೆಯಬಹುದು.
- ಹೊಟ್ಟೆ ಹುಳುಗಳ ನಿವಾರಣೆ: ಒಣಗಿದ ದಾಳಿಂಬೆ ಸಿಪ್ಪೆಯ ಪುಡಿಯನ್ನು ಒಂದು ಚಮಚ ನೀರಿನಲ್ಲಿ ದಿನಕ್ಕೆ ಮೂರು ಬಾರಿ ತೆಗೆದುಕೊಂಡರೆ ಹೊಟ್ಟೆ ಹುಳುಗಳನ್ನು ನಿವಾರಿಸಬಹುದು. ಈ ಪುಡಿ ಪಿರಿಯಡ್ಸ್ ಸಮಯದಲ್ಲಿ ಅಧಿಕ ರಕ್ತಸ್ರಾವಕ್ಕೂ ಸಹಕಾರಿ.
- ಕೆಮ್ಮು ಮತ್ತು ರಕ್ತಸ್ರಾವ: 10 ಗ್ರಾಂ ದಾಳಿಂಬೆ ಸಿಪ್ಪೆಯಲ್ಲಿ 2 ಗ್ರಾಂ ಉಪ್ಪನ್ನು ಬೆರೆಸಿ ಪುಡಿಮಾಡಿ ಜೇನುತುಪ್ಪದೊಂದಿಗೆ ಸೇವಿಸಿದರೆ ಕೆಮ್ಮು ಕಡಿಮೆಯಾಗುತ್ತದೆ. ದಾಳಿಂಬೆ ರಸವನ್ನು ಮೂಗಿಗೆ ಹಾಕಿದರೆ ರಕ್ತಸ್ರಾವ ನಿಲ್ಲುತ್ತದೆ.
- ಆತಂಕ ಮತ್ತು ವಾಕರಿಕೆ ಪರಿಹಾರ: ದಾಳಿಂಬೆ ಬೀಜಗಳು, ಕಾಳು ಮೆಣಸು, ಹುರಿದ ಜೀರಿಗೆ, ಇಂಗು ಮತ್ತು ಕಲ್ಲು ಉಪ್ಪಿನ ಪುಡಿಯನ್ನು ಅರ್ಧ ಚಮಚ ತಿಂದರೆ ವಾಕರಿಕೆ ಸಮಸ್ಯೆ ನಿವಾರಣೆಯಾಗುತ್ತದೆ.
- ಮುಖದ ಹೊಳಪು: ದಾಳಿಂಬೆ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿ, ರೋಸ್ ವಾಟರ್‌ನೊಂದಿಗೆ ಮಿಕ್ಸ್ ಮಾಡಿ ವಾರದಲ್ಲಿ ಮೂರು ಬಾರಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.