
ಶಿವಮೊಗ್ಗ: ಧರ್ಮಸ್ಥಳ ಪರಿಸರದಲ್ಲಿ ನಡೆದಿದೆ ಎನ್ನಲಾದ ಶವ ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಅಧಿಕಾರಿಗಳು, ಪ್ರಮುಖ ಆರೋಪಿ ಚಿನ್ನಯ್ಯನನ್ನು ವಿಚಾರಣೆಗೊಳಪಡಿಸಲು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಆರೋಪಿ ಚಿನ್ನಯ್ಯ ತಾನೇ ಸುಮಾರು 10ಕ್ಕೂ ಹೆಚ್ಚು ಶವಗಳನ್ನು ವಿವಿಧೆಡೆ ಹೂತಿರುವುದಾಗಿ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
ಈ ಹಿನ್ನೆಲೆಯಲ್ಲಿ, ಎಸ್ಐಟಿ ತಂಡವು ಚಿನ್ನಯ್ಯನಿಂದ ಮತ್ತಷ್ಟು ಮಾಹಿತಿ ಕಲೆಹಾಕಲು ಶಿವಮೊಗ್ಗ ನಗರದ ಹೊರವಲಯದಲ್ಲಿರುವ ಸೊಗಾನೆಯ ಕೇಂದ್ರ ಕಾರಾಗೃಹಕ್ಕೆ ಶುಕ್ರವಾರ (ಅಕ್ಟೋಬರ್ 17) ಭೇಟಿ ನೀಡಿದೆ.
ಬೆಳ್ತಂಗಡಿ ನ್ಯಾಯಾಲಯದಿಂದ ಅನುಮತಿ ಪಡೆದಿರುವ ಎಸ್ಪಿ ಸೈಮನ್ ನೇತೃತ್ವದ ವಿಶೇಷ ತಂಡವು, ಚಿನ್ನಯ್ಯನನ್ನು ಕೂಲಂಕುಷವಾಗಿ ವಿಚಾರಣೆ ನಡೆಸುತ್ತಿದೆ. ಕೇವಲ ಒಂದು ಶವ ಹೂತಿಟ್ಟಿರುವ ಆರೋಪದಿಂದ, ಇದೀಗ 10ಕ್ಕಿಂತ ಹೆಚ್ಚು ಶವಗಳನ್ನು ಹೂತಿಟ್ಟಿರುವ ಆತಂಕಕಾರಿ ಹೇಳಿಕೆಯ ಹಿನ್ನೆಲೆಯಲ್ಲಿ, ಎಸ್ಐಟಿ ಅಧಿಕಾರಿಗಳು ಚಿನ್ನಯ್ಯನ ಹೇಳಿಕೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ.
ಎಸ್‌ಐಟಿ ಅಧಿಕಾರಿಗಳು ಶಿವಮೊಗ್ಗದಲ್ಲಿ 2 ದಿನಗಳ ಕಾಲ ಮೊಕ್ಕಾಂ ಹೂಡುವ ಸಾಧ್ಯತೆಯಿದ್ದು, ಈ ಅವಧಿಯಲ್ಲಿ ಆರೋಪಿಯ ಹೇಳಿಕೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲು ಪ್ರಯತ್ನಿಸಲಿದ್ದಾರೆ. ಈ ವಿಚಾರಣೆ ಬಳಿಕ ಪ್ರಕರಣದ ತನಿಖೆ ಮಹತ್ವದ ಹಂತಕ್ಕೆ ತಲುಪುವ ಸಾಧ್ಯತೆಯಿದೆ.




































