
ತಂದೆತಾಯಿಗಳು ತಮ್ಮ ಮಕ್ಕಳನ್ನು ಪ್ರೀತಿಸುವುದು ಮಾತ್ರವಲ್ಲದೆ, ಆ ಪ್ರೀತಿಯನ್ನು ದೈಹಿಕವಾಗಿ ಮತ್ತು ಮಾತಿನಲ್ಲಿ ವ್ಯಕ್ತಪಡಿಸುವುದು ಅತ್ಯಂತ ಮುಖ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರತಿದಿನ ಮಕ್ಕಳಿಗೆ ಒಂದು ಅಪ್ಪುಗೆ ಅಥವಾ ಮುತ್ತು ಕೊಡುವುದು ಸರಳ ವಿಷಯದಂತೆ ಕಂಡರೂ, ಇದು ಮಕ್ಕಳ ಮನಸ್ಸಿನಲ್ಲಿ ಅಪಾರ ಭದ್ರತೆ, ಸಮಾಧಾನ ಮತ್ತು ಆತ್ಮವಿಶ್ವಾಸವನ್ನು ತುಂಬುತ್ತದೆ.
‘ಹ್ಯಾಪಿ ಹಾರ್ಮೋನ್’ ಪಾತ್ರ
ದಿನಾ ಅಪ್ಪಿಕೊಳ್ಳುವುದರಿಂದ ಮಕ್ಕಳ ಮೆದುಳಿನಲ್ಲಿ ‘ಆಕ್ಸಿಟೋಸಿನ್’ ಎಂಬ ಹ್ಯಾಪಿ ಹಾರ್ಮೋನ್ ಬಿಡುಗಡೆಯಾಗುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಈ ಹಾರ್ಮೋನ್ ಮಕ್ಕಳಲ್ಲಿ ಒತ್ತಡ ಮತ್ತು ಭಯವನ್ನು ಕಡಿಮೆ ಮಾಡುತ್ತದೆ, ಕೋಪವನ್ನು ನಿಯಂತ್ರಿಸುತ್ತದೆ ಮತ್ತು ಮನುಷ್ಯರ ನಡುವೆ ಪ್ರೀತಿ, ಬಾಂಧವ್ಯ ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ ಅಪ್ಪಿಕೊಂಡ ತಕ್ಷಣ ಮಕ್ಕಳು ನಕ್ಕು ಶಾಂತರಾಗುತ್ತಾರೆ.
ತಜ್ಞರ ಪ್ರಕಾರ, ಮುತ್ತು ಕೊಟ್ಟಾಗ ಮಕ್ಕಳಲ್ಲಿ ವಿಶೇಷ ಭಾವನೆ ಮೂಡಿ ಹೃದಯ ಬಡಿತ ಬದಲಾಗುತ್ತದೆ, ಉಸಿರಾಟ ನಿಧಾನವಾಗುತ್ತದೆ ಮತ್ತು ಮನಸ್ಸಿನಲ್ಲಿ ಪ್ರೀತಿಯ ವಾತಾವರಣ ಸೃಷ್ಟಿಯಾಗುತ್ತದೆ. ಮುಖ್ಯವಾಗಿ, ಶಾಲೆಗೆ ಹೋಗುವ ಮಕ್ಕಳಿಗೆ ಬೆಳಗ್ಗೆ ಮನೆಯಿಂದ ಹೊರಡುವಾಗ ಒಂದು ಮುತ್ತು ಮತ್ತು ಅಪ್ಪುಗೆ ಕೊಟ್ಟರೆ, ದಿನವಿಡೀ ಅವರ ಮನಸ್ಸು ಶಾಂತವಾಗಿರುತ್ತದೆ, ಪೋಷಕರ ಪ್ರೀತಿ ನೆನಪಿಗೆ ಬರುತ್ತದೆ. ಇದರಿಂದ ಒಂಟಿತನ ದೂರವಾಗಿ, ಶಾಲೆಯಲ್ಲಿ ಯಾವುದೇ ಕೆಲಸವನ್ನು ಧೈರ್ಯವಾಗಿ ಮಾಡಲು ಸಾಧ್ಯವಾಗುತ್ತದೆ.
ಬಾಂಧವ್ಯ ಮತ್ತು ಶಿಸ್ತು ವೃದ್ಧಿ
ಮಕ್ಕಳು ತಪ್ಪು ಮಾಡಿದಾಗ ಅಥವಾ ಅವರು ನೋವಿನಲ್ಲಿದ್ದಾಗ, ಅಳುತ್ತಿರುವಾಗ ಅಪ್ಪಿಕೊಂಡರೆ ಅವರಿಗೆ ಶಕ್ತಿ ದೊರೆಯುತ್ತದೆ. ‘ನಾನು ನಿನ್ನ ಜೊತೆಗಿದ್ದೇನೆ, ಭಯಪಡುವ ಅಗತ್ಯವಿಲ್ಲ’ ಎಂಬ ಭದ್ರತಾ ಭಾವನೆ ಅವರಲ್ಲಿ ಮೂಡುತ್ತದೆ. ಇದರಿಂದ ಮಕ್ಕಳು ತಮ್ಮ ತಪ್ಪನ್ನು ಒಪ್ಪಿಕೊಳ್ಳಲು, ಕಲಿಯಲು ಮತ್ತು ಮತ್ತೆ ಪ್ರಯತ್ನಿಸಲು ಸಿದ್ಧರಾಗುತ್ತಾರೆ.
ದಿನಾ ಹೀಗೆ ಪೋಷಕರ ಪ್ರೀತಿಯನ್ನು ಪಡೆದ ಮಕ್ಕಳು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಗಳಾಗುತ್ತಾರೆ, ಶಿಸ್ತಿನಿಂದ ಇರುತ್ತಾರೆ ಮತ್ತು ಇತರರನ್ನು ಅರ್ಥಮಾಡಿಕೊಳ್ಳುವ ಗುಣ ಹೊಂದಿರುತ್ತಾರೆ ಎಂದು ಅಧ್ಯಯನಗಳು ದೃಢಪಡಿಸಿವೆ. ಅಷ್ಟೇ ಅಲ್ಲದೆ, ಪ್ರೀತಿಯಿಂದ ಮಕ್ಕಳನ್ನು ಹತ್ತಿರ ಸೆಳೆಯುವುದು ತಂದೆತಾಯಿಗೂ ಒಳ್ಳೆಯದು. ಇದು ಅವರ ಮನಸ್ಸಿನ ಒತ್ತಡ ಮತ್ತು ದಿನವಿಡೀ ಕೆಲಸ ಮಾಡಿದ ಆಯಾಸವನ್ನು ದೂರ ಮಾಡಿ, ಮನಸ್ಸನ್ನು ಹಗುರಗೊಳಿಸುತ್ತದೆ, ಜೊತೆಗೆ ಪೋಷಕರು ಮತ್ತು ಮಕ್ಕಳ ನಡುವಿನ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುತ್ತದೆ.



































