
ಬೀದರ್ : ಬಿಜೆಪಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜ್ಯದ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಕಿಡಿಕಾರಿದ್ದಾರೆ. “ಯತ್ನಾಳ್ ನಕಲಿ ಹಿಂದೂ, ಹುಲಿ ಅಲ್ಲ ಇಲಿ. ಜಮೀರ್ ನಕಲಿ ಧಾರ್ಮಿಕ ನಾಯಕ. ಇಬ್ಬರೂ ರಾಜಕೀಯದ ಹೆಸರಲ್ಲಿ ಜನರನ್ನು ಮೋಸಗೊಳಿಸುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
ಸೋಮವಾರ ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, “ಯತ್ನಾಳ್ ಹಿಂದೂತ್ವದ ಹೆಸರಿನಲ್ಲಿ ನಾಟಕ ಮಾಡುತ್ತಿದ್ದಾರೆ. ಜೆಡಿಎಸ್‌ಗೆ ಸೇರಿ ಚಿಕನ್ ಕಬಾಬ್ ತಿಂದು, ಅಲ್ಪಸಂಖ್ಯಾತರ ಧರ್ಮಚಿಹ್ನೆ ಧರಿಸಿ ಟಿಪ್ಪು ಖಡ್ಗ ಹಿಡಿದು ಇಪ್ತಿಯಾರ್ ಕೂಟ ಮಾಡಿದ್ದವರು , ಇಂದು ಹಿಂದೂ ಹೆಸರಿನಲ್ಲಿ ಹದ್ದು ಮೀರಿ ಮಾತನಾಡುತ್ತಿದ್ದಾರೆ” ಎಂದು ಆರೋಪಿಸಿದರು.
“ಒಂದು ಬಾರಿ ಉತ್ತರ ಕರ್ನಾಟಕ ಹುಲಿ, ಮತ್ತೊಮ್ಮೆ ಪಂಚಮಸಾಲಿ ಹುಲಿ, ಮುಂದೆ ಹಿಂದೂ ಹುಲಿ ಎನ್ನಿಸುತ್ತಾರೆ. ಇದು ಯಾರಿಗೆ ತೋರಿಸಲು? ಜನತೆಗೆ ಖಂಡಿತವಾಗಿಯೂ ಈ ನಾಟಕಗಳು ಅರ್ಥವಾಗುತ್ತಿವೆ” ಎಂದು ಟೀಕಿಸಿದರು.
ಅದೇ ರೀತಿ ಜಮೀರ್ ಅಹ್ಮದ್ ವಿರುದ್ಧವೂ ಗಂಭೀರ ಆರೋಪ ಹೊರಿಸಿ, “ಡಿಜೆ ಹಳ್ಳಿ, ಕೆಜಿ ಹಳ್ಳಿ ಕೋಮು ಗಲಭೆಗೆ ನಿಜವಾದ ಹೊಣೆಗಾರನು ಜಮೀರ್. ಪ್ರಚಾರಕ್ಕಾಗಿ ಹಲ್ಲು ಕಡಿದು ಡೊಂಬರಾಟ ಮಾಡುವವರು. ಯುದ್ಧಕ್ಕೆ ಹೋಗುವೆ ಎಂದು ಹೇಳಿಕೆ ನೀಡುವ ಬದಲು, ರಾಜ್ಯದಲ್ಲಿ ಕೋಮು ಶಾಂತತೆ ಕಾಪಾಡುವ ಕೆಲಸ ಮಾಡಲಿ” ಎಂದು ತೀವ್ರವಾಗಿ ಕಿಡಿಕಾರಿದರು.
ಇದು ಮುಂದಿನ ಚುನಾವಣಾ ಹಿನ್ನಲೆಯಲ್ಲಿ ಸಕ್ರಿಯವಾಗುತ್ತಿರುವ ಒಳರಾಜಕೀಯ ದಾಳಿ-ಪ್ರತಿದಾಳಿ ರಾಜಕಾರಣದ ಭಾಗವಾಗಿದ್ದು, ಪಕ್ಷದ ಒಳವಿವಾದಗಳು ಮತ್ತಷ್ಟು ದ್ವಿಗುಣಗೊಳ್ಳುವ ಲಕ್ಷಣಗಳಿವೆ.