
ಬೆಂಗಳೂರು : ಧರ್ಮಸ್ಥಳದಲ್ಲಿ ತಲೆಬುರುಡೆ ಪತ್ತೆ ಪ್ರಕರಣದ ಕುರಿತು ವಿಶೇಷ ತನಿಖಾ ದಳ (ಎಸ್ಐಟಿ) ವರದಿ ನೀಡುವವರೆಗೂ ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ, ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಕೇಂದ್ರಕ್ಕೆ ವರ್ಗಾವಣೆಯಾಗುತ್ತಿರುವ ಬಗ್ಗೆ ಹಬ್ಬಿರುವ ವದಂತಿಗಳಿಗೂ ಅವರು ತೆರೆ ಎಳೆದರು.
ವರದಿ ಬರುವವರೆಗೆ ಧರ್ಮಸ್ಥಳ ಪ್ರಕರಣದ ಬಗ್ಗೆ ಮಾತಾಡಲ್ಲ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಧರ್ಮಸ್ಥಳ ಪ್ರಕರಣದ ತನಿಖೆ ನಡೆಯುತ್ತಿರುವಾಗ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ. ಎಸ್ಐಟಿ ವರದಿ ಬಂದ ನಂತರವೇ ನಾವು ಪ್ರತಿಕ್ರಿಯೆ ನೀಡುತ್ತೇವೆ” ಎಂದು ಹೇಳಿದರು. ಈ ಮೂಲಕ ತನಿಖೆಗೆ ಯಾವುದೇ ಹಸ್ತಕ್ಷೇಪ ಇಲ್ಲ ಎಂದು ಗೃಹ ಸಚಿವರು ಖಚಿತಪಡಿಸಿದರು.
ಪ್ರಣವ್ ಮೊಹಂತಿ ಭೇಟಿ ಹಿಂದಿನ ಸತ್ಯಾಂಶವೇನು?
ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಇಂದು ಬೆಳಗ್ಗೆ ಗೃಹ ಸಚಿವರನ್ನು ಭೇಟಿ ಮಾಡಿದ್ದರ ಬಗ್ಗೆ ಹಲವು ಊಹಾಪೋಹಗಳು ಹಬ್ಬಿದ್ದವು. ಈ ಬಗ್ಗೆ ಸ್ಪಷ್ಟನೆ ನೀಡಿದ ಸಚಿವರು, “ಪ್ರಣವ್ ಮೊಹಂತಿ ಅವರಿಗೆ ಕೇಂದ್ರದಲ್ಲಿ ಹುದ್ದೆ ಸಿಕ್ಕಿದೆ. ಆ ಕುರಿತು ಮಾಹಿತಿ ನೀಡಲು ಅವರು ಬಂದಿದ್ದರು. ಜೊತೆಗೆ, ಫೇಕ್ ನ್ಯೂಸ್, ಆನ್‌ಲೈನ್ ಗೇಮ್‌ಗಳ ಬಗ್ಗೆ ತರಲು ಉದ್ದೇಶಿಸಿರುವ ಹೊಸ ನಿಯಮಗಳ ಬಗ್ಗೆ ಬ್ರೀಫಿಂಗ್ ಮಾಡಲು ಬಂದಿದ್ದರು. ಇದು ಬಿಟ್ಟು ಬೇರೆ ಯಾವುದೇ ವಿಚಾರವನ್ನು ಚರ್ಚಿಸಿಲ್ಲ” ಎಂದು ಹೇಳಿದರು.
ಕೇಂದ್ರದ ಹುದ್ದೆಗೆ ನೇಮಕ: ಗೊಂದಲಕ್ಕೆ ತೆರೆ ಎಳೆದ ಸಚಿವರು
ಪ್ರಣವ್ ಮೊಹಂತಿ ಅವರನ್ನು ಕೇಂದ್ರದ ಹುದ್ದೆಗೆ ವರ್ಗಾಯಿಸಲಾಗುತ್ತಿದೆ ಎಂಬ ಊಹಾಪೋಹಗಳಿಗೂ ಗೃಹ ಸಚಿವರು ಸ್ಪಷ್ಟನೆ ನೀಡಿದರು. “ಅವರು ಕೇವಲ ಆಯ್ಕೆಯಾಗಿದ್ದಾರೆ ಅಷ್ಟೇ. ಕೇಂದ್ರ ಸರ್ಕಾರದಿಂದ ಅಧಿಕೃತವಾಗಿ ಪತ್ರ ಬಂದು, ಅವರನ್ನು ಕಳುಹಿಸಿಕೊಡುವಂತೆ ಕೇಳಿದಾಗ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಪ್ರಸ್ತುತ ಅವರು ಇಲ್ಲೇ ಇದ್ದಾರೆ” ಎಂದು ತಿಳಿಸಿದರು.
ಫೇಕ್ ನ್ಯೂಸ್ ಬಗ್ಗೆ ಸಚಿವರ ಎಚ್ಚರಿಕೆ
ಸಮಾಜದಲ್ಲಿ ಶಾಂತಿ ಕದಡುವ ಮತ್ತು ಭಾವನೆಗಳಿಗೆ ಧಕ್ಕೆ ತರುವಂತಹ ಪೋಸ್ಟ್‌ಗಳ ಕುರಿತು ಗೃಹ ಸಚಿವರು ಎಚ್ಚರಿಕೆ ನೀಡಿದರು. “ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಪೋಸ್ಟ್‌ಗಳನ್ನು ನಾವು ಗಮನಿಸುತ್ತಿದ್ದೇವೆ. ಈ ಹಿಂದೆ ದಕ್ಷಿಣ ಕನ್ನಡದಲ್ಲಿ ಕೋಮು ಗಲಭೆಗಳಿಗೆ ಕಾರಣವಾಗುವ ಪೋಸ್ಟ್‌ಗಳ ವಿರುದ್ಧ ಕ್ರಮ ಕೈಗೊಂಡಿದ್ದೆವು. ಈಗಲೂ ಇಲ್ಲಸಲ್ಲದ ವಿಷಯಗಳನ್ನು ಹಾಕಿ ಗೊಂದಲ ಸೃಷ್ಟಿಸಲು ಯತ್ನಿಸಿದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದರು.