
ನವದೆಹಲಿ: ನಕಲಿ ಸುದ್ದಿ, ವಂಚನೆ ಮತ್ತು ದುರುಪಯೋಗದಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮೆಟಾ ಒಡೆತನದ ವಾಟ್ಸಾಪ್ ಭಾರತದಲ್ಲಿ ಕಠಿಣ ಕ್ರಮ ಕೈಗೊಂಡಿದೆ. ಜೂನ್ 2025 ರಲ್ಲಿ, ತನ್ನ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 98 ಲಕ್ಷಕ್ಕೂ ಹೆಚ್ಚು ಭಾರತೀಯ ಖಾತೆಗಳನ್ನು ವಾಟ್ಸಾಪ್ ನಿಷೇಧಿಸಿದೆ.
ಕಂಪನಿಯ ಇತ್ತೀಚಿನ ಮಾಸಿಕ ಅನುಸರಣಾ ವರದಿಯ ಪ್ರಕಾರ, 9,967,000 ಕ್ಕೂ ಹೆಚ್ಚು ಭಾರತೀಯ ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ. ಈ ಕ್ರಮವು ಮುಖ್ಯವಾಗಿ ಬಳಕೆದಾರರ ದುಷ್ಕೃತ್ಯ, ತಪ್ಪು ಮಾಹಿತಿ ಹರಡುವಿಕೆ ಮತ್ತು ವೇದಿಕೆಯ ದುರುಪಯೋಗಕ್ಕೆ ಸಂಬಂಧಿಸಿದೆ. 2021ರ ಐಟಿ ನಿಯಮಗಳ ಅನುಸಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಾಟ್ಸಾಪ್ ಸ್ಪಷ್ಟಪಡಿಸಿದೆ.
ವಾಟ್ಸಾಪ್ ಭಾರತದಲ್ಲಿ 500 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು, ತನ್ನ ಸುರಕ್ಷತಾ ವರದಿಯಲ್ಲಿ ಫೆಬ್ರವರಿ 2025 ರಲ್ಲಿ ಒಟ್ಟು 17,649 ಬಳಕೆದಾರರ ದೂರುಗಳನ್ನು ಸ್ವೀಕರಿಸಿದ್ದಾಗಿ ತಿಳಿಸಿದೆ. ಈ ದೂರುಗಳ ಆಧಾರದ ಮೇಲೆ 427 ಖಾತೆಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಇದರ ಜೊತೆಗೆ, ಬಳಕೆದಾರರ ಕುಂದುಕೊರತೆಗಳ ಕುರಿತು ಬಂದ ಎರಡು ನಿರ್ದೇಶನಗಳನ್ನು ಕೂಡ ಕಂಪನಿಯು ಪಾಲಿಸಿದೆ. ಈ ಮೂಲಕ ವಾಟ್ಸಾಪ್ ತನ್ನ ವೇದಿಕೆಯನ್ನು ದುರುಪಯೋಗ ಪಡಿಸಿಕೊಳ್ಳದಂತೆ ತಡೆಯಲು ನಿರಂತರ ಪ್ರಯತ್ನಿಸುತ್ತಿದೆ.