
ಉಡುಪಿ : ಉಡುಪಿಯ ಕಲ್ಪನಾ ಟಾಕೀಸ್ ಬಳಿ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರಿಗೆ ಹಲ್ಲೆ ನಡೆಸಿ ತಪ್ಪಿಸಿಕೊಂಡು ಓಡಿ ಹೋಗುತ್ತಿದ್ದ ಮಾನಸಿಕ ಅಸ್ವಸ್ಥ ಯುವಕನನ್ನು ಸಮಾಜ ಸೇವಕ ವಿಶು ಶೆಟ್ಟಿ ಅವರು ಸಾರ್ವಜನಿಕರ ಸಹಾಯದಿಂದ ರಕ್ಷಿಸಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಗುಣಮುಖನಾದ ಆತನನ್ನು ಗುರುವಾರ ಆತನ ಹುಟ್ಟೂರು ಕೋಲ್ಕತ್ತಕ್ಕೆ ರೈಲಿನ ಮೂಲಕ ಕಳುಹಿಸಿಕೊಟ್ಟು ನೈಜ ಮಾನವೀಯತೆ ಮೆರೆದಿದ್ದಾರೆ.
ಈ ಮಾನಸಿಕ ಅಸ್ವಸ್ಥ ಯುವಕ ಕೊಲ್ಕತ್ತದ ಸತೀಂದರ್ ಸಿಂಗ್, ಗುಣಮುಖನಾಗಿ ಆಸ್ಪತ್ರೆ ಸಿಬ್ಬಂದಿಗಳಿಗೆ ತನ್ನ ಕುಟುಂಬದ ವಿಳಾಸವನ್ನು ನೀಡಿ ಊರಿಗೆ ಹೋಗುವ ಇಚ್ಛೆಯನ್ನು ವ್ಯಕ್ತ ಪಡಿಸಿದ್ದಾನೆ. ಆತ ನೀಡಿದ ಮಾಹಿತಿಯನ್ನು ಅನುಸರಿಸಿ ದೂರವಾಣಿ ಕರೆಯ ಮೂಲಕ ಆತನ ಪತ್ನಿಯನ್ನು ಸಂಪರ್ಕಿಸಿ ಮಾಹಿತಿ ನೀಡಲಾಗಿದೆ. ಆದರೆ ಪತ್ನಿಗೆ ಚಿಕ್ಕ ಮಕ್ಕಳಿರುವುದರಿಂದ ಆಕೆ ಉಡುಪಿಗೆ ಬರಲು ಅಸಹಾಯಕತೆ ವ್ಯಕ್ತ ಪಡಿಸಿದ್ದು, ಗಂಡನನ್ನು ರೈಲಿನ ಮೂಲಕ ಕೊಲ್ಕತ್ತಕ್ಕೆ ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ. ಅದರಂತೆ ವಿಶು ಶೆಟ್ಟಿ ಅವರು ಸತಿಂದರ್ ಸಿಂಗ್‌ನನ್ನು ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ದು, ಅಲ್ಲಿಂದ ಕೊಲ್ಕತ್ತಕ್ಕೆ ಸಾಗುವ ರೈಲಿನಲ್ಲಿ ಕಳುಹಿಸಿಕೊಟ್ಟಿದ್ದಾರೆ
ಹುಟ್ಟೂರಿಗೆ ತೆರಳುವ ಸಂದರ್ಭದಲ್ಲಿ ಬರಿಗೈಯಲ್ಲಿ ಹೇಗೆ ತೆರಳಲಿ ಎಂದು ದು:ಖಿಸುತ್ತಿದ್ದ ಸತಿಂದರ್ ಸಿಂಗ್‌ಗೆ ರೈಲು ಟಿಕೇಟು ಜೊತೆಗೆ ರೂ.7500/– ನೀಡಿ ವಿಶು ಶೆಟ್ಟಿ ಸಹಕರಿಸಿದ್ದಾರೆ. ಅಲ್ಲದೆ ಆಸ್ಪತ್ರೆಯ ಚಿಕಿತ್ಸೆಯ ವೆಚ್ಚ ರೂ.9600/- ಗಳಾಗಿದ್ದು, ದಾನಿ ಗಿರೀಶ್ ಅವರು ರೂ.7,೦೦೦/- ನೀಡಿದ್ದರೆ, ಉಳಿದ ಮೊತ್ತವನ್ನು ವಿಶು ಶೆಟ್ಟಿ ಅವರೇ ಭರಿಸಿದ್ದಾರೆ. ವಿಶು ಶೆಟ್ಟಿ ಅವರ ಈ ಮಾನವೀಯ ಕಳಕಳಿಗೆ ಅಪಾರ ಪ್ರಶಂಸೆ ವ್ಯಕ್ತವಾಗಿದೆ.
ಈ ಸೇವಾ ಕಾರ್ಯದಲ್ಲಿ ಸಾಮಾಜಿಕ ಕಾರ್ಯಕರ್ತ ಹರೀಶ್ ಉದ್ಯಾವರ ನೆರವಾದರು.