
ಗದಗ: “ಸಮ ಬಾಳು, ಸಮ ಪಾಲು” ತತ್ವದ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೀಡಿದ ಹೇಳಿಕೆಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. “ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧರು ಕರ್ನಾಟಕದ ಪ್ರಜೆಗಳು. ನಾವು ಅಲ್ಪ ಸಂಖ್ಯಾತರು ಹಾಗೂ ಹಿಂದುಳಿದವರ ಬಗ್ಗೆ ಚಿಂತಿಸುತ್ತೇವೆ. ಸಮ ಬಾಳು, ಸಮ ಪಾಲು ಎನ್ನುವವರು ತಮ್ಮ ಪಕ್ಷದಲ್ಲಿ ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಹಾಗೂ ಕೇಂದ್ರದಲ್ಲಿ ಸಚಿವರು ಮಾಡಿಕೊಳ್ಳಲಿ. ಇಬ್ಬರು ಕ್ರಿಶ್ಚಿಯನ್, ಮೂರು ಜನ ಮುಸ್ಲಿಂ ಮಾಡಿಕೊಳ್ಳಿ ನೋಡೋಣ. ಆಗ ವಿಜಯೇಂದ್ರರವರು ‘ಸಮ ಬಾಳು, ಸಮ ಪಾಲು’ ಬಗ್ಗೆ ಮಾತನಾಡಬಹುದು ಅನಿಸುತ್ತದೆ” ಎಂದು ಡಿಕೆಶಿ ಹೇಳಿದರು.
“ಮೊದಲು ಕುವೆಂಪು ಬರೆದ ನಾಡಗೀತೆ ಸರಿಯಾಗಿ ಓದಲಿ, ‘ಯಾರು ಸೇರಿದ್ರೆ ಶಾಂತಿ ತೋಟ’ ಎಂಬುದನ್ನು ಸರಿಯಾಗಿ ಓದಲಿ. ಈಗ ಅಧ್ಯಕ್ಷರಾಗಿದ್ದಾರೆ, ಅವರ ಲೆವೆಲ್ ನಲ್ಲಿ ಇರಲಿ” ಎಂದೂ ಅವರು ಟೀಕಿಸಿದರು.
ನಮ್ಮ ಎರಡು ವರ್ಷದ ಸಂಭ್ರಮ ಮಾಡಲೇಬೇಕಾಗಿದೆ, ಮಾಡುತ್ತೇವೆ ಎಂದ ಅವರು, “ಪ್ರತಿ ಸಚಿವರು ತಮ್ಮ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಭೆ ಮಾಡಿ ಎಂದು ಸೂಚಿಸಿದ್ದೇವೆ. ಆ ಕೆಲಸ ಮುಗಿದ ಮೇಲೆ ಮುಂದಿನ ಎಲ್ಲಾ ಯೋಜನೆಗಳ ಬಗ್ಗೆ ಚಿಂತನೆ ಮಾಡುತ್ತೇವೆ” ಎಂದರು.